ಬೆಳಗಾವಿ: 2020ರಲ್ಲಿ ಬೆಳಗಾವಿ ನಗರದಲ್ಲಿ ನಡೆದಿದ್ದ ಶಹಬಾಜ್ ಪಠಾಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿರುವ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ ಮತ್ತು ಬಸವಣ್ಣಿ ನಾಯಕ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. ವಿಚಾರಣೆ ವೇಳೆ ನಾಲ್ವರು ಆರೋಪಿಗಳು ಇನ್ನೂ ಇಬ್ಬರ ಮೇಲೆ ಕೊಲೆ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.
2020ರಂದು ಶಹಬಾಜ್ ಪಠಾಣ್ ತನ್ನ ಸ್ನೇಹಿತನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಶಿವಬಸವ ನಗರ ಪ್ರದೇಶದಲ್ಲಿ ಆರೋಪಿಗಳು ಬಿಳಿ ಬಣ್ಣದ ಟಾಟಾ ಸುಮೋ ವಾಹನದ ಮೂಲಕ ಶಹಬಾಜ್ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡು ಓಡಿದ ಶಹಬಾಜ್ ಸಮೀಪದಲ್ಲಿದ್ದ ನಿವೃತ್ತ ಡಿವೈಎಸ್ಪಿ ಅವರ ಮನೆಗೆ ಆಶ್ರಯಕ್ಕಾಗಿ ಹೋಗಿದ್ದಾನೆ.
ಆದರೂ ಬೆಂಬಿಡದ ಆರೋಪಿಗಳು ಅಲ್ಲಿಗೂ ಬೆನ್ನಟ್ಟಿಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಶಹಬಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗಿಳಗಾದ ಶಹಬಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಪ್ರಕರಣದ ತನಿಖೆ ವೇಳೆ ಪೊಲೀಸರು ಒಟ್ಟು 30 ಮಂದಿ ಸಾಕ್ಷಿದಾರರ ಹೇಳಿಕೆಗಳು ಮತ್ತು 128ಕ್ಕೂ ಅಧಿಕ ದಾಖಲೆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿದ್ದು ಅಪರಾಧಿಗಳೆಂದು ತೀರ್ಪು ನೀಡಿತ್ತು. ಇದೀಗ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 9.60 ಲಕ್ಷ ದಂಡ ವಿಧಿಸಿದೆ. ಅದರಲ್ಲಿ 8 ಲಕ್ಷವನ್ನು ಮೃತ ಶಹಬಾಜ್ ಪಠಾಣ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಹಾಗೂ 1.60 ಲಕ್ಷವನ್ನು ದೂರುದಾರರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

