ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಪ್ರದೇಶದಲ್ಲಿ ಇ- ಖಾತಾವನ್ನು ಸ್ವಯಂಘೋಷಿತ ಆಸ್ತಿ ತೆರಿಗೆ(ಎಸ್ಎಎಸ್) ಐಡಿ ಬಳಸಿ ಆನ್ ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಗದರ್ಶನದಂತೆ ನಗರದ ಐದು ಪಾಲಿಕೆಗಳು ನಾಗರೀಕರ ಸೌಲಭ್ಯಕ್ಕಾಗಿ ಎಸ್ಎಎಸ್ ಪ್ರಾಪರ್ಟಿ ತೆರಿಗೆ ಐಡಿ ಬಳಸಿಕೊಂಡು ಇ-ಖಾತಾವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ.
13,00,000 ಇ-ಖಾತಾಗಳನ್ನು ತಕ್ಷಣವೇ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವುದು, ಅನಗತ್ಯ ವಿಳಂಬ ಮತ್ತು ಆಡಳಿತಾತ್ಮಕ ಅಡೆತಡೆ ನಿವಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
BBMPeAasthi.karnataka.gov.in ವೆಬ್ಸೈಟ್ ಗೆ ಭೇಟಿ ನೀಡಬೇಕು. ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ ನಿಮ್ಮ ಎಸ್ಐಎಸ್ ಅಪ್ಲಿಕೇಶನ್ ಪ್ರಾಪರ್ಟಿ ತೆರಿಗೆ ಐಡಿಯನ್ನು ನಮೂದಿಸಿದರೆ ಇ- ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಕ್ರಮದಿಂದ ಪಾಲಿಕೆಯ ಕಚೇರಿಗಳಿಗೆ ಭೇಟಿ ನೀಡುವುದು, ಆನ್ಲೈನ್ ನಲ್ಲಿ ಹೆಸರು ನಮೂದಿಸಿ ಹುಡುಕಾಡುವುದು ತಪ್ಪಲಿದೆ. ಮಾಲೀಕರು ಇ-ಖಾತಾವನ್ನು ಬೇಗನೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

