ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಶಬರಿಮಲೆ ಚಿನ್ನ ಕಳುವು ಪ್ರಕರಣದಲ್ಲಿ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಬಂಧನವಾಗಿ 90 ದಿನಗಳು ಕಳೆದರೂ ಇನ್ನೂ ಎಸ್ ಐಟಿ ಚಾರ್ಜ್ ಸೀಟ್ ಸಲ್ಲಿಕೆ ಮಾಡಿಲ್ಲ. 90 ದಿನಗಳಾದರೂ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಕೇರಳ ಕೋರ್ಟ್ ಉನ್ನಿಕೃಷ್ಣಗೆ ಜಾಮೀನು ಮಂಜೂರು ಮಾಡಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ 4.54 ಕೆಜಿ ಚಿನ್ನ ಕಳುವು ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ ಐಟಿ ಉನ್ನಿಕೃಷ್ಣನ್ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ-ಇಡಿ ಕೂಡ ಎಂಟ್ರಿಯಾಗಿದ್ದು, ಇಂದು ಕೇರಳದ ತಿರುವನಂತಪುರಂ, ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಉನ್ನಿಕೃಷ್ಣನ್ ನಿವಾಸ, ಬಳ್ಳಾರಿಯ ರೊದ್ದಂ ಜ್ಯುವೆಲರಿ ಶಾಪ್ ಮಾಲೀಕ ಗೋವರ್ಧನ್ ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ನಡುವೆಯೇ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಗೆ ಜಾಮೀನು ಮಂಜೂರು ಆಗಿದೆ ಎಂದು ತಿಳಿದುಬಂದಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಗರ್ಭಗುಡಿಯ ಬಾಗಿಲುಗಳಿಗೆ ಹಾಕಲಾಗಿದ್ದ ಸ್ವರ್ಣ ಕವಚದಲ್ಲಿ ಸುಮಾರು ನಾಲ್ಕೂವರೆ ಕೆಜಿಯಷ್ಟು ಬಂಗಾರ ನಾಪತ್ತೆಯಾಗಿದೆ. ದ್ವಾರಪಾಲಕರ ಮೂರ್ತಿಗಳ ಚಿನ್ನದ ಕವಚಗಳಿಗೆ ಚಿನ್ನದ ಮರುಲೇಪನ ಮಾಡುವ ಕೆಲಸಕ್ಕಾಗಿ 2019ರಲ್ಲಿ ಆ ಕವಚಗಳನ್ನು ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕಂಪನಿ ಮಾಲೀಕ ಉನ್ನಿಕೃಷ್ಣನ್ ಪೊಟ್ಟಿ ಎಂಬುವರು ಈ ಕವಚಗಳಿಗೆ ಚಿನ್ನದ ಮರುಲೇಪನವನ್ನು ಮಾಡಿಕೊಡುವುದಾಗಿ ಹೇಳಿ ಪಡೆದಿದ್ದರು. ಚಿನ್ನದ ಮರುಲೇಪನಕ್ಕೆ ಕೊಡುವಾಗ 2019ರ ಜು. 19ರಲ್ಲಿ 42.8 ಕೆಜಿ ತೂಕ ಇದ್ದ ಚಿನ್ನ ಬಳಿಕ 38.25 ಕೆಜಿಗೆ ಇಳಿದಿತ್ತು. ಸುಮಾರು 4.54 ಕೆಜಿ ಕಡಿಮೆಯಾಗಿತ್ತು. ಇದರ ಹಿಂದೆ ಉನ್ನಿಕೃಷ್ಣನ್ ಕೈವಾಡವಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಉನ್ನಿಕೃಷ್ಣನ್ ಸೇರಿದಂತೆ 13 ಆರೋಪಿಗಳನ್ನು ಎಸ್ ಐಟಿ ಬಂಧಿಸಿತ್ತು.

