ತುಮಕೂರು: ನಿವೇಶನ ಸಮೀಕ್ಷೆಯ ವಿಚಾರವಾಗಿ ಹಿರಿಯ ರಂಗಕರ್ಮಿ, ರಾಜ್ಯಸಭೆ ಮಾಜಿ ಸದಸ್ಯೆ ಬಿ. ಜಯಶ್ರೀ ಅವರನ್ನು ಭೂಮಾಪನ ಅಧಿಕಾರಿ ಕಚೇರಿಗೆ ಅಲೆದಾಡಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಯಲ್ಲಿ ನಡೆದಿದೆ.
ರಂಗಭೂಮಿಯ ಭೀಷ್ಮ ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಹಿರಿಯ ನಟಿ ಬಿ. ಜಯಶ್ರೀ ರಂಗ ಚಟುವಟಿಕೆಗೆ ಮೀಸಲಾದ ಜಿ.ವಿ. ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿ ಜಮೀನು ಖಾತೆ ಮಾಡಿಸಿಕೊಳ್ಳಲು ಅವಶ್ಯಕವಾದ ಸರ್ವೆ ಕೆಲಸಕ್ಕೆ ಹಣ ಸಂದಾಯ ಮಾಡಿ ಒಂದು ತಿಂಗಳನಿಂದ ಕಚೇರಿಗೆ ಅಲೆದಾಡಿದ್ದಾರೆ.
ಗುರುವಾರ ಬೆಳಿಗ್ಗೆ ಬರಲು ಹೇಳಿದ್ದ ಅಧಿಕಾರಿ ಜಯಶ್ರೀ ಅವರ ಕೈಗೆ ಸಿಗದೇ ಬೇರೆ ಬೇಜವಾಬ್ದಾರಿ ತೋರಿಸಿದ್ದಾರೆ. 3-4 ಬಾರಿ ಕಚೇರಿಗೆ ಅಲೆದರೂ ಸ್ಪಂದನೆ ಸಿಕ್ಕಿಲ್ಲ. ಮೇಲಾಧಿಕಾರಿಗಳ ಸೂಚನೆ ಬೇಕಿದೆ ಎಂದು ಸರ್ವೆಯರ್ ಹೇಳಿದ್ದಾರೆ ಎಂದು ಕಚೇರಿಗೆ ಅಲೆದಾಡಿದ ಜಯಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

