ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ಯಾವ ಜಿಲ್ಲೆಯಲ್ಲಿಯೂ ಹೊರಗುತ್ತಿಗೆ ಅಥವಾ ಗೌರವಧನ ಆಧಾರದಲ್ಲಿ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳದಂತೆ ಸರ್ಕಾರ ಸೂಚನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಈ ಬಗ್ಗೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ನರೇಗಾ ಯೋಜನೆಯ ರೂಪುರೇಷೆಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಅಥವಾ ಗೌರವಧನ ಆಧಾರದಲ್ಲಿ ಹೊಸದಾಗಿ ಯಾವುದೇ ಸಿಬ್ಬಂದಿ ನೇಮಿಸುವುದನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಹೊರಗುತ್ತಿಗೆ ಅಥವಾ ಗೌರವಧನ ಆಧಾರದಲ್ಲಿ ಕಾಲಕಾಲಕ್ಕೆ ಅಗತ್ಯ ಸಿಬ್ಬಂದಿಯನ್ನು ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಹಂತದಲ್ಲಿ ವಿವಿಧ ಕೆಲಸಗಳಿಗೆ ತೊಡಗಿಸಿಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನರೇಗಾದಡಿ ಹೊರಗುತ್ತಿಗೆ, ಹೊಸ ನೇಮಕಾತಿಗೆ ಸರ್ಕಾರ ನಿರ್ಬಂಧ ವಿಧಿಸಿ ಸೂಚನೆ ನೀಡಿದೆ.

