ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಅವರ ಭವಿಷ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆಗೆದುಕೊಂಡ ನಿರ್ಧಾರವು ಆಯ್ಕೆ ಸಮಿತಿ ಹಾಗೂ ಆಡಳಿತ ಮಂಡಳಿ ನಡುವೆ ತೀವ್ರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ೨೦೨೭ರ ಏಕದಿನ ವಿಶ್ವಕಪ್ ಯೋಜನೆಯಲ್ಲಿ ರೋಹಿತ್ ಶರ್ಮಾ ಅವರ ಹೆಸರನ್ನು ಕೈಬಿಡಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಧರಿಸಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ ಇನ್ನೂ ತಂಡದ ಯೋಜನೆಯಲ್ಲಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಆಯ್ಕೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ರೋಹಿತ್ ಶರ್ಮಾ ಅವರಿಗೆ ತಂಡದಿಂದ ವಿಶ್ರಾಂತಿ ನೀಡಿ ಮುಂದಿನ ವಿಶ್ವಕಪ್ಗೆ ಹೊಸ ತಂಡ ಕಟ್ಟಲು ಆಯ್ಕೆ ಸಮಿತಿ ಯೋಜಿಸಿತ್ತು. ಆದರೆ ಸೋಶಿಯಲ್ ಮೀಡಿಯಾ ಒತ್ತಡಕ್ಕೆ ಮಣಿದು ಬಿಸಿಸಿಐ ಅಧಿಕಾರಿಗಳು ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಆಯ್ಕೆ ಸಮಿತಿ ಭಾವಿಸಿದೆ. ೨೦೨೭ರ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅವರನ್ನು ಸೇರಿಸಿಕೊಂಡರೆ ಭಾರತ ತಂಡಕ್ಕೆ ಗೆಲುವು ಸಾಧಿಸುವುದು ಕಷ್ಟ ಎಂಬ ಅಭಿಪ್ರಾಯದಲ್ಲೇ ಆಯ್ಕೆಗಾರರು ಈಗಲೂ ಇದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗಳ ನಡುವೆ, ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಶೀಘ್ರದಲ್ಲೇ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಅಗರ್ಕರ್ ಅವರ ಒಪ್ಪಂದವನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವರ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸಲು ಬಿಸಿಸಿಐ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ.

