ದೇಶಾದ್ಯಂತ ತಲೆದೂರಿರುವ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆಯು ಸಾಮಾನ್ಯ ಜನರ ಅಡುಗೆ ಮನೆಯ ದಾಟಿ ಈಗ ಶಾಲಾ ಅಂಗಳಕ್ಕೂ ಕಾಲಿಟ್ಟಿದೆ. ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದ ಕಾರಣ, ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟದ ಬದಲಾಗಿ ಅನಿವಾರ್ಯವಾಗಿ ಮಕ್ಕಳಿಗೆ ‘ಪಾನಿಪುರಿ’ (ಪುಚ್ಕಾ) ವಿತರಿಸಲಾಗಿದೆ. ಶಾಲಾ ಆವರಣದಲ್ಲೇ ಮಕ್ಕಳು ಸಾಲಾಗಿ ನಿಂತು ಪಾನಿಪುರಿ ಸವಿಯುತ್ತಿರುವ ಈ ವಿಡಿಯೋ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಂಧನ ಬಿಕ್ಕಟ್ಟಿನ ಭೀಕರತೆಯನ್ನು ಸಾರಿ ಹೇಳುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಪಶ್ಚಿಮ ಬಂಗಾಳದ ಭದ್ರಕಾಳಿ ಪ್ರೌಢಶಾಲೆಯ ಸಹ ಶಿಕ್ಷಕಿ ನಂದಿತಾ ಸರ್ಕಾರ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶಾಲೆಯ ಆವರಣದೊಳಗೆ ಪಾನಿಪುರಿ ಗಾಡಿಯವನನ್ನು ಕರೆಸಿ, ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳಿಗೆ ಒಬ್ಬೊಬ್ಬರಿಗೆ 5 ರಿಂದ 6 ಪಾನಿಪುರಿಗಳನ್ನು ನೀಡಲಾಗುತ್ತಿದೆ. ಮಕ್ಕಳು ಖುಷಿಯಿಂದ ಪಾನಿಪುರಿ ಸವಿಯುತ್ತಿದ್ದರೂ, ಈ ದೃಶ್ಯ ನೋಡುಗರನ್ನು ಆಲೋಚನೆಗೆ ದೂಡಿದೆ.
https://www.instagram.com/reel/DV7tCYuEdj9/?utm_source=ig_web_copy_link&igsh=MzRlODBiNWFlZA==
ಪೌಷ್ಟಿಕಾಂಶದ ಕೊರತೆಯ ಭೀತಿ
ಬಿಸಿಯೂಟ ಯೋಜನೆಯು ಬಡ ಮಕ್ಕಳ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸುವ ಪ್ರಮುಖ ಮೂಲವಾಗಿದೆ. ಆದರೆ ಸಿಲಿಂಡರ್ ಕೊರತೆಯಿಂದಾಗಿ:
ಅಸಮತೋಲಿತ ಆಹಾರ: ಬಿಸಿಯೂಟದ ಬದಲು ಪಾನಿಪುರಿಯಂತಹ ತಿಂಡಿಗಳನ್ನು ನೀಡುವುದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಊಟಕ್ಕೆ ಕಟ್: ಕೆಲವು ಕಡೆ ಅಡುಗೆ ಮಾಡಲು ಸೌದೆ ಅಥವಾ ಇತರ ಪರ್ಯಾಯ ಮಾರ್ಗಗಳಿಲ್ಲದೆ ಮಕ್ಕಳು ಹಸಿವಿನಿಂದ ಇರುವಂತಾಗಿದೆ.
ಶಿಕ್ಷಣದ ಮೇಲೆ ಪರಿಣಾಮ: ಹಸಿವಿನಿಂದ ಇರುವ ಮಕ್ಕಳು ಪಾಠದ ಮೇಲೆ ಗಮನ ಹರಿಸುವುದು ಕಷ್ಟಕರವಾಗುತ್ತಿದೆ.
ವೈರಲ್ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆ:
ಈ ವಿಡಿಯೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ:
ಒಂದು ವರ್ಗ: “ಗ್ಯಾಸ್ ಇಲ್ಲದಿದ್ದರೂ ಮಕ್ಕಳು ಹಸಿವಿನಿಂದ ಇರಬಾರದು ಎಂಬ ಶಿಕ್ಷಕರ ಕಾಳಜಿ ಮತ್ತು ಸಮಯಪ್ರಜ್ಞೆ ಮೆಚ್ಚುವಂತದ್ದು” ಎಂದಿದ್ದಾರೆ.
ಮತ್ತೊಂದು ವರ್ಗ: “ಪಾನಿಪುರಿ ಕೇವಲ ಒಂದು ತಿಂಡಿ ಮಾತ್ರ. ಇದು ಶಾಲೆಯಲ್ಲಿ ನೀಡುವ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟಕ್ಕೆ ಎಂದಿಗೂ ಸಮನಾಗಲು ಸಾಧ್ಯವಿಲ್ಲ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ,ಇತ್ತೀಚೆಗೆ ಬೆಂಗಳೂರಿನ ಪಿಜಿ (PG)ಗಳು ಮತ್ತು ಸಣ್ಣ ಹೋಟೆಲ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸಿಗದೆ ಜನರು ಪರದಾಡುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಈಗ ಇದೇ ಸಮಸ್ಯೆ ಶಾಲಾ ಅಡುಗೆ ಕೋಣೆಗಳಿಗೂ ತಟ್ಟುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

