ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ.
ಇದುವರೆಗೂ ದಾವಣಗೆರೆ ದಕ್ಷಿಣ ಕ್ಷೇತ್ರ 4 ಚುನಾವಣೆ ಎದುರಿಸಿದೆ. ಆದರೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂಬುದು ಬಿಜೆಪಿ ತಂತ್ರಗಾರಿಕೆ. ಆದರೆ ಪಕ್ಷದಲ್ಲಿನ ಬಣ ರಾಜಕೀಯ ಪಕ್ಷದ ನಾಯಕರಿಗೆ ತಲೆನೋವು ತಂದಿದೆ.
ದಾವಣಗೆರೆ ದಕ್ಷಿಣದಲ್ಲಿ ಜಿ.ಎಂ. ಸಿದ್ದೇಶ್ವರ್ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ ಹೆಸರು ಟಿಕೆಟ್‌ಗಾಗಿ ಕೇಳಿ ಬರುತ್ತಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಪರಾಜಿತರಾಗಿದ್ದ ಅಜಯ್ ಕುಮಾರ್ ಹೆಸರು ಚಾಲ್ತಿಯಲ್ಲಿದೆ.
ಇಬ್ಬರ ಜಗಳ ಮತ್ತೊಬ್ಬರಿಗೆ ಲಾಭ: ದಾವಣಗೆರೆ ದಕ್ಷಿಣದ ಉಪ ಚುನಾವಣೆ ಟಿಕೆಟ್‌ಗಾಗಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಮೊರೆ ಹೋಗಿದೆ. ರಾಜ್ಯದ ನಾಯಕರು ಅಭ್ಯರ್ಥಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿದರೆ ಯಾವುದೇ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆಯಾಗಲಿದೆ. ಬಿಜೆಪಿಯ ಅಚ್ಚರಿಯ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್. ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ, ಕುರುಬ ಸಮುದಾಯಕ್ಕೆ ಸೇರಿದ ವಿನಯ್ ಕುಮಾರ್ ಬಹಳಷ್ಟು ಯುವ ಸಮುದಾಯದ ಬೆಂಬಲ ಹೊಂದಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಚುನಾವಣೆಯಲ್ಲಿ ವಿನಯ್ ಕುಮಾರ್ 42,907 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ ಈ ಬಾರಿ ಅವರಿಗೆ ಬಿಜೆಪಿ ದಾವಣಗೆರೆ ದಕ್ಷಿಣದ ಟಿಕೆಟ್ ಆಫರ್ ಮಾಡಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ವಿನಯ್ ಹೆಸರು ಪ್ರಸ್ತಾಪವಾಗಿದ್ದು, ಹೈಕಮಾಂಡ್ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಈ ಕುರಿತು ವಿನಯ್ ಕುಮಾರ್ ಮಾತನಾಡಿ, “ಬಿಜೆಪಿಯ ರಾಜ್ಯ ನಾಯಕರು ದಾವಣಗೆರೆ ದಕ್ಷಿಣದಿಂದ ಸ್ಪರ್ಧೆ ಮಾಡುವಂತೆ ನನಗೆ ಕರೆ ಮಾಡಿ ಆಮಂತ್ರಿಸಿದ್ದು, ಸ್ಪರ್ಧಿಸಲು ನಾನು ಒಪ್ಪಿಗೆ ಸೂಚಿಸಿದ್ದೇನೆ. ಟಿಕೆಟ್ ಸಿಕ್ಕರೂ ಸಿಗದಿದ್ದರೂ ಬಿಜೆಪಿ ಅಭ್ಯರ್ಥಿ ಬೆಂಬಲಿಸುತ್ತೆನೆ” ಎಂದು ಹೇಳಿದ್ದಾರೆ.
ಆದರೆ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ ನಾಗಪ್ಪ ಮಾತನಾಡಿ, “ಜಿಲ್ಲೆಯಲ್ಲಿ ನಡೆಯುತ್ತಿರುವ ಬಣ ರಾಜಕೀಯ ಇನ್ನು ಮುಂದೆ ಇರುವುದಿಲ್ಲ. ಭಿನ್ನಮತ ಪ್ರಾರಂಭವಾದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೈಕಮಾಂಡ್ ಎಚ್ಚರಿಸಿದೆ. ವಿನಯ್ ಕುಮಾರ್ ಹೆಸರು ಪ್ರಸ್ತಾಪವಾದ ಬಗ್ಗೆ ತಿಳಿದಿಲ್ಲ. ಆದರೆ 10 ಆಕಾಂಕ್ಷಿಗಳ ಹೆಸರನ್ನು ಜಿಲ್ಲಾ ಬಿಜೆಪಿ ಘಟಕ ರಾಜ್ಯ ಘಟಕಕ್ಕೆ ಸಲ್ಲಿಕೆ ಮಾಡಿದೆ” ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ದಾವಣಗೆರೆಯಲ್ಲಿ ಸಭೆಯನ್ನು ನಡೆಸಿದ್ದರು. ಆದರೆ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿರಲಿಲ್ಲ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಚರ್ಚಿಸಲಾಗಿದ್ದು, ಕೇಂದ್ರ ಚುನಾವಣಾ ಸಮಿತಿಗೆ ಕಳಿಸಿಕೊಡಲಾಗಿದೆ.
ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ಒಂದು ವಾರ ಮಾತ್ರ ಬಾಕಿ ಇರುವ ಕಾರಣ ಈ ವಾರವೇ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಪಕ್ಷಗಳು ಅಂತಿಮಗೊಳಿಸಲಿವೆ. ಎರಡು ಪಕ್ಷದಿಂದ ಅಭ್ಯರ್ಥಿ ಯಾರು? ಎಂಬುದು ರಾಜ್ಯಾದ್ಯಂತ ಚರ್ಚೆಯ ವಿಚಾರವಾಗಿದೆ.

