ಬೆಂಗಳೂರು: ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತಾ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಮೊದಲು ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನವಾಗಿತ್ತು. ಶಾಲಾ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಷರತ್ತುಗಳ ಬಗ್ಗೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ಸದನ ಸಮಿತಿ ಅಧ್ಯಯನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದೆ.
ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಮತ್ತು ನವೀಕರಿಸಿದ ಪರಿಷ್ಕೃತ ದಾಖಲೆಗಳನ್ನು ಆಡಳಿತ ಮಂಡಳಿಗಳು ಎಸ್.ಎ.ಟಿ.ಎಸ್ ನಲ್ಲಿ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ನಂತರ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಪ್‌ಡೇಟ್ ಮಾಡುವುದು. ಅದರಲ್ಲಿನ ಮಾಹಿತಿಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣಕ್ಕೆ ಪರಿಗಣಿಸಲಾಗುವುದು.
ಉಪನಿರ್ದೇಶಕರ ಕಛೇರಿಯಲ್ಲಿ ಪ್ರತಿ ಅರ್ಜಿ ಸ್ವೀಕರಿಸಿದ ನಂತರ ನಿಗದಿತ ಅವಧಿಗಿಂತ ಹೆಚ್ಚು ದಿನಗಳು ಲಾಗಿನ್‌ನಲ್ಲಿ ಬಾಕಿ ಉಳಿಸಿಕೊಳ್ಳುವಂತಿಲ್ಲ. ಉಪನಿರ್ದೇಶಕರು ಅರ್ಜಿಗಳಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪರಿಶೀಲಿಸಿ ಅಗತ್ಯಾನುಸಾರ ಅಂತಹ ಅರ್ಜಿಗಳನ್ನು ನಿಗದಿಪಡಿಸಿದ ದಿನದೊಳಗಾಗಿ ರೋಲ್ ಬ್ಯಾಕ್ ಮಾಡಿ (DEO ಲಾಗಿನ್‌ಗೆ ಬಂದ ದಿನದಿಂದ 05 ದಿನಗಳೊಳಗೆ) ಆಡಳಿತ ಮಂಡಳಿಗೆ ಕಳುಹಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿದಾರರು ಅವಕಾಶ ವಂಚಿತರಾಗುತ್ತಾರೆ. ಆಯಾ ಲಾಗಿನ್ ಸಿಬ್ಬಂದಿ/ಅಧಿಕಾರಿಗಳು ಇದರ ಜವಾಬ್ದಾರಿಯನ್ನು ಅರಿತು ನಿಗದಿತ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಚ್ಚರಿಕೆ ನೀಡಿದೆ. ಉಲ್ಲೇಖದಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಕಡ್ಡಾಯವಾಗಿ ಪಾಲಿಸಿ ಪ್ರಥಮ ಮಾನ್ಯತೆ/ಮಾನ್ಯತೆಯನ್ನು ನವೀಕರಿಸಲು ಸೂಚಿಸಿದೆ. ಒಂದು ವೇಳೆ ಮಾನ್ಯತೆ ನವೀಕರಿಸುವ ಬಗ್ಗೆ ನಿಯಮ ಉಲ್ಲಂಘನೆಯಾದಲ್ಲಿ ಅಥವಾ ಅನಗತ್ಯ ವಿಳಂಬ ಅಥವಾ ಇತರೆ ಆಧಾರದ ಮೇಲೆ ದೂರುಗಳು ಬಂದಲ್ಲಿ ತಮ್ಮ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.




