ಮುಂಬೈ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25, 26ರಂದು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಎಸ್.ಬಿ.ಐ. ನೌಕರರು ಮುಂದೂಡಿದ್ದಾರೆ.
ಹೀಗಾಗಿ ಸೋಮವಾರ ಮತ್ತು ಮಂಗಳವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಖಿಲ ಭಾರತ ಎಸ್.ಬಿ.ಐ. ನೌಕರರ ಒಕ್ಕೂಟ ಈ ಬಗ್ಗೆ ಮಾಹಿತಿ ನೀಡಿದೆ.
ಮುಂಬೈನ ಕಾರ್ಪೊರೇಟ್ ಕಚೇರಿಯಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ಸಂಘಗಳ ಪ್ರತಿನಿಧಿಗಳ ನಡುವೆ ಮುಂಬೈನಲ್ಲಿ ನಡೆದ ಸಕಾರಾತ್ಮಕ ಮಾತುಕತೆಯ ನಂತರ ನಿರ್ಧಾರ ಕೈಗೊಳ್ಳಲಾಗಿದೆ.
ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಒಕ್ಕೂಟದ ಪ್ರತಿನಿಧಿಗಳ ಸಭೆ ಯಶಸ್ವಿಯಾಗಿದ್ದು, ಸಕಾರಾತ್ಮಕ ಸುಧಾರಣೆ ತರಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಅಖಿಲ ಭಾರತ ಎಸ್.ಬಿ.ಐ. ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ಒಕ್ಕೂಟದ ಸದಸ್ಯರಿಗೆ ಸಂದೇಶ ಕಳುಹಿಸಿದ್ದಾರೆ.
ವಿವಿಧ ಶಾಖೆಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ, ಹೊರಗುತ್ತಿಗೆಗೆ ತಡೆ, ವೈದ್ಯಕೀಯ ವೆಚ್ಚ ಸೇರಿದಂತೆ ವಿವಿಧ 16 ಬೇಡಿಕೆಗಳನ್ನು ಈಡೇರಿಸಲು ಖಚಿತ ಭರವಸೆ ಸಿಕ್ಕಿದೆ. ಹೀಗಾಗಿ ಮೇ 25, 26ರಂದು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಸದ್ಯಕ್ಕೆ ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

