ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿರುವ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಸಂತ್ರಸ್ತೆಯ ಭವಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಹೈಕೋರ್ಟ್ ಈ ಆದೇಶ ನೀಡಿದೆ.
ಸಂತ್ರಸ್ತ ಬಾಲಕಿಯ ಪರವಾಗಿ ಆಕೆಯ ತಾಯಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಈ ಆದೇಶ ನೀಡಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿಯಮಾವಳಿಗಳಂತೆ ಬಾಲಕಿಯ ಗೌಪ್ಯತೆಯನ್ನು ನ್ಯಾಯಾಲಯ ರಕ್ಷಣೆ ಮಾಡಿದೆ. ಏಳು ತಿಂಗಳ ಗರ್ಭಿಣಿಯಾಗಿರುವ ಬಾಲಕಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿ ಪರಿಶೀಲಿಸಲು ಕೆಸಿ ಜನರಲ್ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತುರ್ತು ವೈದ್ಯಕೀಯ ಮಂಡಳಿ ರಕ್ಷಿಸುವಂತೆ ನ್ಯಾಯಾಲಯ ಮೇ 19 ರಂದು ನಿರ್ದೇಶನ ನೀಡಿದ್ದು, ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದ ಮಂಡಳಿ ಗರ್ಭಪಾತ ಮಾಡುವುದು ಸೂಕ್ತವೆಂದು ಅಂತಿಮ ವರದಿ ನೀಡಿದ್ದು, ಈ ವರದಿಯನ್ನು ಅಂಗೀಕರಿಸಿದ ನ್ಯಾಯಪೀಠ ಗರ್ಭಪಾತಕ್ಕೆ ಅನುಮತಿ ನೀಡಿದೆ.
ಗರ್ಭಪಾತ ನಡೆಸಿದ ನಂತರ ಭ್ರೂಣವನ್ನು ಅತಿ ಜಾಗರೂಕತೆಯಿಂದ ಸಂರಕ್ಷಿಸಬೇಕು. ಇದು ಅತ್ಯಾಚಾರ ಪ್ರಕರಣದ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ ಎಂದು ಆಸ್ಪತ್ರೆಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಅಲ್ಲದೇ, ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರ ಪರಿಹಾರ ಯೋಜನೆಯಡಿ ಕಾನೂನು ಬದ್ಧವಾಗಿ ಸಿಗಬೇಕಾದ ಕೌನ್ಸೆಲಿಂಗ್, ವೈದ್ಯಕೀಯ ವೆಚ್ಚ ಮತ್ತು 3 ಲಕ್ಷ ರೂ.ವರೆಗಿನ ಪರಿಹಾರ ಧನವನ್ನು ಪಡೆದುಕೊಳ್ಳಲು ಸಂತ್ರಸ್ತೆಗೆ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಂತ್ರಸ್ತೆ ಪರವಾಗಿ ವಿನಂತಿ ಸಲ್ಲಿಸಿದರೆ ಸಂಬಂಧಿಸಿದ ಪ್ರಾಧಿಕಾರಗಳು ಅದನ್ನು ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

