ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಹೋಟೆಲ್ ಮಾಲೀಕರು, ಸಾಮಿಲ್ ಮಾಲೀಕರ ಜೊತೆ ಸಭೆಯನ್ನು ನಡೆಸಿದರು. ಕಟ್ಟಿಗೆ ಒದಗಿಸುವಂತೆ ಸಾಮಿಲ್‌ಗಳಿಗೆ ಸೂಚನೆ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದಾಗಿ ದೇಶದಲ್ಲಿ ವಾಣಿಜ್ಯ ಬಳಕೆ ಮಾಡುವ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಹೋಟೆಲ್ ಉದ್ಯಮ ನಡೆಸುವವರಿಗೆ ತೊಂದರೆಯಾಗಿದೆ ಎಂದರು.
ಹೊಟೇಲ್ ಉದ್ಯಮ ಮುಂದುವರೆಸಲು ಪರ್ಯಾಯ ಉರುವಲುಗಳಾದ ಕಟ್ಟಿಗೆ ಹಾಗೂ ವಿದ್ಯುತ್ ಉರುವಲುಗಳ ಬಳಕೆಗೆ ಒತ್ತು ನೀಡುವುದರೊಂದಿಗೆ ಹೋಟೆಲ್ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗವಕಾಶವನ್ನು ಮುಂದುವರೆಸುವಂತೆ ಹೋಟೆಲ್ ಮಾಲೀಕರ ಸಂಘದವರಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಸಾಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಹೋಟೆಲ್ ಉದ್ಯಮಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಟ್ಟಿಗೆ ಲಭ್ಯವಾಗುವಂತೆ ಸಹಕರಿಸುವಂತೆ ಸಾಮಿಲ್ ಮಾಲೀಕರ ಸಂಘದವರಿಗೆ ತಿಳಿಸಿದರು.
ಅಲ್ಲದೇ ಹೋಟೆಲ್ ಉದ್ಯಮಿಗಳು ತಮ್ಮ ದೈನಂದಿನ ಚಟುವಟಿಕೆಗೆ ವಿದ್ಯುತ್ ಸ್ಟವ್‌ಗಳ ಬಳಕೆಗೆ ಮುಂದಾದಲ್ಲಿ ಅವರುಗಳಿಗೆ ವಿದ್ಯುತ್ ಶಕ್ತಿ ಸರಬರಾಜು ಮಾಡುವ ಕಾರ್ಯವನ್ನು ಶೀಘ್ರದಲ್ಲಿಯೇ ಮಾಡಿಕೊಡುವಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಬಗ್ಗೆ ಸಮಸ್ಯೆ ಬಗ್ಗೆ ಗ್ಯಾಸ್ ಏಜೆನ್ಸಿ ಮಾಲೀಕರೊಂದಿಗೆ ಸಭೆಯನ್ನು ನಡೆಸಿದರು.
ಯುದ್ಧ ಸನ್ನಿವೇಶದ ಹಿನ್ನೆಲೆ ಅನಿಲ ಕೊರತೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರಾಷ್ ಆಗುತ್ತಿದೆ.
ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹಬಳಕೆ, ಅತೀ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು, ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.

