ನವದೆಹಲಿ: ಪಾರ್ಶ್ವವಾಯು ಇರುವಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದ್ದಂತೆ ಆತ ಎದ್ದು ಓಡಿಹೋದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬರುತ್ತದೆ. ಆತನಿಗೆ ದೈಹಿಕ ಸಮಸ್ಯೆ ಇರುವಂತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಡಿಯೊ ಚಿತ್ರೀಕರಿಸುತ್ತಿದ್ದ ಮತ್ತೊಬ್ಬರು ಅವರ ಬಳಿ ತೆರಳಿ ಆರೋಗ್ಯದ ಸ್ಥಿತಿಯ ಕುರಿತು ಪ್ರಶ್ನಿಸುತ್ತಾರೆ.
ಆರೋಗ್ಯದ ಬಗ್ಗೆ ಪ್ರಶ್ನೆ, ಚಿಕಿತ್ಸೆ ನೀಡುವ ಭರವಸೆ
ವ್ಯಕ್ತಿಗೆ ಯಾವಾಗಿನಿಂದ ಈ ಸಮಸ್ಯೆ ಇದೆ, ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆಯೇ ಹಾಗೂ ಎಲ್ಲಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಕೇಳುತ್ತಾರೆ. ಈ ವೇಳೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ನೀಡಿದ ಉತ್ತರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಲಾಗಿದೆ.
ಬಳಿಕ, ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಚುಚ್ಚುಮದ್ದೊಂದನ್ನು ತೋರಿಸಿ ಅದರಿಂದ ಗುಣಮುಖರಾಗಬಹುದು ಎಂಬ ರೀತಿಯಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳುತ್ತಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ದಿಢೀರನೆ ಎದ್ದು ಅಲ್ಲಿಂದ ಓಡಿಹೋಗುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.
ಇದನ್ನು ಕಂಡು ವಿಡಿಯೊ ಮಾಡುತ್ತಿದ್ದ ವ್ಯಕ್ತಿಯೂ ಅಚ್ಚರಿಗೆ ಒಳಗಾಗುತ್ತಾರೆ. ಈ ಅನಿರೀಕ್ಷಿತ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
‘2X ವೇಗದಲ್ಲಿ ಓಡಿದ’ ಎಂದು ನೆಟ್ಟಿಗರ ಕಾಮೆಂಟ್
ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಚಿಕಿತ್ಸೆ ನೀಡುವ ಮಾತು ಕೇಳುತ್ತಿದ್ದಂತೆ ವ್ಯಕ್ತಿ ವೇಗವಾಗಿ ಓಡಿಹೋದ ದೃಶ್ಯವನ್ನು ಉಲ್ಲೇಖಿಸಿ, ‘2X ವೇಗದಲ್ಲಿ ಓಡಿದ’ ಎಂಬ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ವಿಡಿಯೊವನ್ನು ಮೊಹಮ್ಮದ್ ತೋಹಾ 09 ಎಂಬ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಆದರೆ, ಘಟನೆ ನಡೆದ ನಿಖರ ಸ್ಥಳ ಮತ್ತು ವ್ಯಕ್ತಿಯ ಗುರುತು ಸೇರಿದಂತೆ ಹಲವು ವಿವರಗಳು ಸ್ಪಷ್ಟವಾಗಿಲ್ಲ.
ವಿಡಿಯೊದಲ್ಲಿನ ದೃಶ್ಯಗಳಲ್ಲಿ ವ್ಯಕ್ತಿ ನಿಜವಾಗಿಯೂ ಪಾರ್ಶ್ವವಾಯುವಿನಿಂದ ಬಳಲುತ್ತಿರಲಿಲ್ಲ. ಅಂಗವೈಕಲ್ಯ ಆಗಿರುವ ರೀತಿ ನಾಟಕ ಮಾಡುತ್ತಿದ್ದ. ಈ ಮೂಲಕ ಭಿಕ್ಷೆ ಬೇಡುತ್ತಿದ್ದ ಎನ್ನುವುದು ಕಂಡು ಬಂದಿದೆ. ಇದು ನಿಜವಾಗಿಯೂ ದೈಹಿಕ ಅಂಗವೈಕಲ್ಯ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ತಪ್ಪಾಗಿ ಅನುಮಾನಿಸುವಂತಾಗಬಾರದು. ಅಗತ್ಯವಿರುವವರಿಗೆ ನೆರವು ನೀಡುವಾಗ ವಿವೇಚನೆ ಮತ್ತು ಮಾನವೀಯತೆ ಎರಡನ್ನೂ ಕಾಪಾಡಿಕೊಳ್ಳುವುದು ಮುಖ್ಯ.
ಅಸ್ಸಾಂ ಹೋಟೆಲ್ ನಲ್ಲಿ ಗುಂಡಿನ ದಾಳಿ: ಕನಿಷ್ಠ 5 ಮಂದಿ ಸಾವು, ಹಲವರಿಗೆ ಗಾಯ
ಗುವಾಹಟಿ: ಗುವಾಹಟಿಯ ಹೋಟೆಲ್ ಒಂದರಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುವಾಹಟಿಯ ‘ಬೋರಾ ಸರ್ವಿಸ್’ ಎದುರು ಹಾಗೂ ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ‘ಹೋಟೆಲ್ ಬಿಲಾಸ್ ಇನ್’ (Hotel Bilas Inn) ನಲ್ಲಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಓರ್ವ ವ್ಯಕ್ತಿಯ ಬಂಧನ
ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಅವರು, ನಾಲ್ಕು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ. “ನಾವು ನಾಲ್ಕು ಮೃತದೇಹಗಳನ್ನು ವಶಕ್ಕೆ ಪಡೆದಿದ್ದೇವೆ. ಇವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ,” ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಹಂತ ಸುದ್ದಿಗಾರರಿಗೆ ತಿಳಿಸಿದರು.
ಗುಂಡಿನ ದಾಳಿಯಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಮಹಂತ ಹೇಳಿದರಾದರೂ, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡವರ ಪೈಕಿ ಒಬ್ಬರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಗುವಾಹಟಿಯ ಹೋಟೆಲ್ ಒಂದರಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರವಾನಗಿ ಪಡೆದ .32-ಬೋರ್ ಪಿಸ್ತೂಲ್ ಬಳಸಿ ಈ ಗುಂಡಿನ ದಾಳಿ ನಡೆಸಲಾಗಿದೆ ಮತ್ತು ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹೋಟೆಲ್ ಮಾಲೀಕರು ಮತ್ತು ಆ ಆಸ್ತಿಯನ್ನು ಗುತ್ತಿಗೆಗೆ (ಲೀಸ್) ಪಡೆದಿದ್ದ ವ್ಯಕ್ತಿಯೊಬ್ಬರ ನಡುವಿನ ವಿವಾದವು ಈ ಗುಂಡಿನ ದಾಳಿಗೆ ಕಾರಣವಾಗಿದ್ದು, ಇದರಲ್ಲಿ ಐವರು ಮೃತಪಟ್ಟಿದ್ದಾರೆ.
ಮೃತಪಟ್ಟ ಐವರೂ ಹೋಟೆಲ್ ಮಾಲೀಕರೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಗುತ್ತಿಗೆದಾರನೇ ಈ ದಾಳಿಯನ್ನು ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

