ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಇಡಿ ದಾಳಿ ನಮಗೆ ಗೊತ್ತಿಲ್ಲದ ವಿಚಾಅರವೇನಲ್ಲ. ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ನಡೆದಿದೆ. ಈ ಹಿಂದೆಯೀ ಅವರ ಮನೆ ಮೇಲೆ ಇಡಿ ದಾಳಿ ನಡೆದಿತ್ತು ಎಂದರು.
ಸತೀಶ್ ಜಾರಕಿಹೊಳಿ ಹಿರಿಯ ಸಚಿವರು. ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಸಮಾಜ ಸೇವೆ ಮಾಡಿದ್ದಾರೆ. ಯಾವುದೇ ಮುಚ್ಚು ಮರೆ ಇಲ್ಲ. ಯಾವುದೇ ತನಿಖೆ ನಡೆಸಿದರೂ ಅದಕ್ಕೆ ಅವರು ಉತ್ತರ ಕೊಡುತ್ತಾರೆ. ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಅವರ ಜೊತೆ ಪಕ್ಷ ಮತ್ತು ಸರ್ಕಾರ ಶೇಕಡಾ ನೂರರಷ್ಟು ಗಟ್ಟಿಯಾಗಿ ನಿಲ್ಲಲಿದೆ. ಅವರು ಯಾವ ತನಿಖೆ ಎದುರಿಸಲು ಸಿದ್ಧರಿದ್ದಾರೆ ಎಂದರು.
ಇದೊಂದು ರಾಜಕೀಯ ಪ್ರೇರಿತವಾದ ದಾಳಿ. ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದೆ. ಸತೀಶ್ ಜಾರಕಿಹೊಳಿ ಬೆಳವಣಿಗೆಗಳನ್ನು ಸಹಿಸದೇ ಇಂತಹ ದಾಳಿ ಮೂಲಕ ಅವರನ್ನು ಕಟ್ಟಿಹಾಕುವ ಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ಮೇಲೆ ಯಾಕೆ ಇಡಿ ದಾಳಿ ಮಾಡುತ್ತಿಲ್ಲ? ರಾಹುಲ್ ಗಾಂಧಿ ಅವರ ಮೇಲೆ ಎಫ್‌ಐಆರ್ ದಾಖಲಿಸುತ್ತಾರೆ, ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡುತ್ತಾರೆ. ನಾವು ಯಾವ ಕಾಲದಲ್ಲಿದ್ದೇವೆ? ಇಂತಹ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲ, ನಮ್ಮ ಶಾಸಕರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದೇನೆ ಎಂದರು.
ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಲ್ಲಿ ಆಶ್ಚರ್ಯವಿಲ್ಲ ಎಂದ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆಸಿದರಲ್ಲಿ ಅಚ್ಚರಿ ಇಲ್ಲ. ಇದೆಲ್ಲವೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡಿ ಇಡಿ ದಾಳಿ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಬಾಮೈದ ಮಂಜುನಾಥ್ ಅವರ ತಂದೆ ದೇವೇಂದ್ರಪ್ಪ ಬಿಜೆಪಿ ನಾಯಕರು. ದೇವೇಂದ್ರಪ್ಪ ಅವರ ಮನೆ ಮೇಲೆ ಯಾಕೆ ಇಡಿ ಅಧಿಕಾರಿಗಳು ದಾಳಿ ನಡೆಸಿಲ್ಲ? ಅವರ ಮಗನ ಮೇಲೆ ದಾಳಿ ನಡೆಸಿದ್ದಾರೆ. ಕಾರಣ ಮಂಜುನಾಥ್ ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದಾರೆಂಬ ಕಾರಣಕ್ಕೆ.
ಸತೀಶ್ ಜಾರಕಿಹೊಳಿ ಸಹೋದರರ ಮನೆ ಮೇಲೆ ಇಡಿ ದಾಳಿ ಏಕಿಲ್ಲ? ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಇವರೆಲ್ಲರ ಮನೆ ಮೇಲೆ ಯಾಕೆ ಇಡಿ ದಾಳಿ ನಡೆಸಿಲ್ಲ? ಅವರೆಲ್ಲರೂ ಬಿಜೆಪಿಯವರು. ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ನಾಯಕರ ಸೂಚನೆ ಮೇರೆಗೆ ನಡೆಯುತ್ತಿರುವ ದಾಳಿ. ಕೇವಲ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಮಾತ್ರ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತವೆ. ಯಾಕೆ ಬಿಜೆಪಿ ನಾಯಕರೊಬ್ಬರ ಮನೆ ಮೂಲೂ ದಾಳಿ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು.

