ಕೊಪ್ಪಳ: ವಿಲ್ ಮೂಲಕ ಬಂದಿರುವ ಜಮೀನಿನ ಉತಾರ ಮಾಡಿಸಿಕೊಡಲು ರೂ. 40,000 ಲಂಚ ಸ್ವೀಕರಿಸುತ್ತಿದ್ದ ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ ಅಕ್ಟೋಬರ್ 6ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ: ಗಂಗಾವತಿ ತಾಲೂಕಿನ ಅಂಜನಹಳ್ಳಿ ನಿವಾಸಿ ರಾಮು ತಂದೆ ವೆಂಕಟೇಶ ಎಂಬುವವರಿಗೆ ತಮ್ಮ ಸಣ್ಣಜ್ಜನಿಂದ ವಿಲ್ ಮೂಲಕ ಜಮೀನು ಬಂದಿತ್ತು. ಈ ಜಮೀನಿನ ದಾಖಲೆಗಳನ್ನು(ಉತಾರ) ತಮ್ಮ ಹೆಸರಿಗೆ ಮಾಡಿಸಿಕೊಡುವಂತೆ ಅವರು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ರೂ. 40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ರಾಮು ಅವರು ಅಕ್ಟೋಬರ್ 5 ರಂದು ಕೊಪ್ಪಳದ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮಂಗಳವಾರ (ಅಕ್ಟೋಬರ್ 6) ಮಧ್ಯಾಹ್ನ ಸುಮಾರು 12:40ರ ವೇಳೆಗೆ ಫಿರ್ಯಾದಿ ರಾಮು ಅವರಿಂದ ರೂ. 40,000 ಲಂಚದ ಹಣವನ್ನು ಪಡೆಯುತ್ತಿದ್ದಾಗ ಇಬ್ಬರೂ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ, ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ, ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಸುನೀಲ ಮೇಗಲಮನಿ, ಶೈಲಾ ಎಸ್. ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಕೊಪ್ಪಳ ಲೋಕಾಯುಕ್ತ ಕಚೇರಿಯ ಪ್ರಕಟಣೆ ತಿಳಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾ ಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನ
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಮಕ್ಕಳು ಹಾಗೂ ಯುವಜನರ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಮಟ್ಟದ ‘ಕಲಾ ಪ್ರತಿಭೋತ್ಸವ–2026’ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾ ನೈಪುಣ್ಯವನ್ನು ವೃದ್ಧಿಗೊಳಿಸಲು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಪರ್ಧೆಗಳನ್ನು ಮೂರು ವಯೋಮಾನದ ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ಕನಿಷ್ಠ 8 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಬಾಲ ಪ್ರತಿಭೆ. ಕನಿಷ್ಠ 14 ರಿಂದ 18 ವರ್ಷದೊಳಗಿನ ಕಿಶೋರರಿಗಾಗಿ ಕಿಶೋರ ಪ್ರತಿಭೆ ಮತ್ತು ಕನಿಷ್ಠ 18 ರಿಂದ 30 ವರ್ಷದೊಳಗಿನ ಯುವಕ-ಯುವತಿಯರಿಗಾಗಿ ಯುವ ಪ್ರತಿಭೆ.
ಸ್ಪರ್ಧೆಯ ಕಲಾ ಪ್ರಕಾರಗಳು: ಬಾಲ ಪ್ರತಿಭೆ ಮತ್ತು ಕಿಶೋರ ಪ್ರತಿಭೆ (ಏಕವ್ಯಕ್ತಿ ಸ್ಪರ್ಧೆ)ಯಡಿ ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಜಾನಪದ ಸಂಗೀತ (7 ನಿಮಿಷ), ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ (7 ನಿಮಿಷ) ಹಾಗೂ ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ).
ಅದೇ ರೀತಿ ಯುವ ಪ್ರತಿಭೆ (ಏಕವ್ಯಕ್ತಿ ಸ್ಪರ್ಧೆ):ಯಡಿ ‘ನನ್ನ ನೆಚ್ಚಿನ ಸಾಹಿತಿ’ ಆಶುಭಾಷಣ (7 ನಿಮಿಷ), ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ (7 ನಿಮಿಷ) ಮತ್ತು ಜನಪದ ಗೀತೆ (7 ನಿಮಿಷ). ಹಾಗೂ ಸಮೂಹ ಸ್ಪರ್ಧೆಗಳ (ಯುವ ಪ್ರತಿಭೆ ವಿಭಾಗ) ಅಡಿ ನಾಟಕ (45 ನಿಮಿಷ) ಹಾಗೂ ಜನಪದ ನೃತ್ಯ (10 ನಿಮಿಷ).
ಜನಪದ ನೃತ್ಯ ವಿಭಾಗದಲ್ಲಿ ಸಿದ್ಧಿ ಡಮಾಮಿ, ಡೊಳ್ಳು, ಗೊರವರ, ಗೊರುಕಾನ, ಜಗ್ಗಲಿಗೆ, ಕಂಗೀಲು, ಸೋಮನ ಕುಣಿತ, ಪಟ ಕುಣಿತ, ಕಂಸಾಳೆ, ಪೂಜಾ ಕುಣಿತ, ಜಡೆ ಕೋಲಾಟ, ಲಂಬಾಣಿ, ಕರಡಿ ಮಜಲು, ಕೊಡವ ನೃತ್ಯಗಳಿಗೆ ಮಾತ್ರ ಅವಕಾಶವಿದ್ದು, ಮುದ್ರಿತ (ರೆಕಾರ್ಡೆಡ್) ಧ್ವನಿಮುದ್ರಿಕೆಯ ಹಾಡುಗಳಿಗೆ ನೃತ್ಯ ಮಾಡಲು ಅವಕಾಶವಿರುವುದಿಲ್ಲ.
ಮುಖ್ಯ ನಿಯಮಗಳು ಮತ್ತು ನಿಬಂಧನೆಗಳು: ಕಲಾ ಪ್ರತಿಭೋತ್ಸವವು ಜಿಲ್ಲಾ ಮಟ್ಟ, ವಲಯ (ವಿಭಾಗ) ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳನ್ನು ವಿಭಾಗ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಒಬ್ಬ ಸ್ಪರ್ಧಿಯು ಕೇವಲ ಒಂದೇ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಯಾವುದೇ ಪ್ರತ್ಯೇಕ ಅರ್ಜಿ ನಮೂನೆ ಇರುವುದಿಲ್ಲ. ಎ-4 ಅಳತೆಯ ಬಿಳಿ ಹಾಳೆಯ ಮೇಲೆ ಸ್ವ-ವಿವರವನ್ನು ಬರೆದು, ಆಯಾ ಶಾಲೆ-ಕಾಲೇಜು ಮುಖ್ಯಸ್ಥರಿಂದ ಅಥವಾ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ/ಪುರಸಭೆ/ನಗರಸಭೆಯಿಂದ ಜನ್ಮ ದಿನಾಂಕವನ್ನು ದೃಢೀಕರಿಸಿಕೊಂಡು ಅರ್ಜಿ ಸಲ್ಲಿಸುವುದು ಕಡ್ಡಾಯ.
ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಭಾಗವಹಿಸಿದ ಪ್ರಮಾಣಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ನಗದು ಬಹುಮಾನ ಇರುವುದಿಲ್ಲ; ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ತೀರ್ಪುಗಾರರು ನೀಡುವ ನಿರ್ಣಯವೇ ಅಂತಿಮವಾಗಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸ್ವ-ವಿವರ ಹಾಗೂ ದೃಢೀಕೃತ ಜನ್ಮ ದಿನಾಂಕದ ದಾಖಲೆಯೊಂದಿಗೆ ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 1ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಕಾರ್ಯಾಲಯಕ್ಕೆ ನೇರವಾಗಿ ಸಲ್ಲಿಸಬೇಕೆಂದು ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

