ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್ ಆರಂಭವಾಗುವ ವೇಳೆಗೆ ರೋಹಿತ್ಗೆ 40 ವರ್ಷ ಹಾಗೂ ಕೊಹ್ಲಿಗೆ 39 ವರ್ಷ ವಯಸ್ಸಾಗಲಿದ್ದು, ಅವರು ಮುಂದಿನ ವಿಶ್ವಕಪ್ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಬೆನ್ನಲ್ಲೇ ಭಾರತ ತಂಡದ ಮಾಜಿ ಆಲ್ರೌಂಡರ್ ಸಂದೀಪ್ ಪಾಟೀಲ್ ನೀಡಿರುವ ಹೇಳಿಕೆಯೊಂದು ಕ್ರೀಡಾಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಭಾರತೀಯ ಕ್ರಿಕೆಟ್ ತಂಡದ ಬೆಂಚ್ ಸ್ಟ್ರೆಂತ್ (ಮೀಸಲು ಆಟಗಾರರ ಬಲ) ಅತ್ಯಂತ ಪ್ರಬಲವಾಗಿದೆ ಎಂದು ಶ್ಲಾಘಿಸಿರುವ ಸಂದೀಪ್ ಪಾಟೀಲ್, 2027ರ ವಿಶ್ವಕಪ್ನಲ್ಲಿ ರೋಹಿತ್ ಮತ್ತು ಕೊಹ್ಲಿ ಇರಲಿ ಅಥವಾ ಇಲ್ಲದಿರಲಿ ತಂಡದ ಪ್ರದರ್ಶನದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ದಿಟ್ಟವಾಗಿ ಹೇಳಿದ್ದಾರೆ. ಮುಂದಿನ ವಿಶ್ವಕಪ್ನಲ್ಲಿ ಈ ಇಬ್ಬರು ದಗ್ಗಜರು ಆಡುವುದು ಅವರ ಫಿಟ್ನೆಸ್, ಆಡುವ ಆಸಕ್ತಿ ಮತ್ತು ಆಯ್ಕೆಗಾರರ ದೂರದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಸಂದೀಪ್ ಪಾಟೀಲ್, “ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಭಾರತೀಯ ಕ್ರಿಕೆಟ್ನ ದಂತಕಥೆಗಳು. ಅವರ ಕೊಡುಗೆ ಅಪಾರ. ಆದರೆ ಪ್ರಸ್ತುತ ನಮ್ಮಲ್ಲಿರುವ ಪ್ರತಿಭಾವಂತ ಯುವ ಆಟಗಾರರ ಪಡೆಯನ್ನು ನೋಡಿದರೆ, ರೋಹಿತ್ ಮತ್ತು ವಿರಾಟ್ ತಂಡದಲ್ಲಿ ಇಲ್ಲದಿದ್ದರೂ ಭಾರತೀಯ ಕ್ರಿಕೆಟ್ಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

