HomeKarnatakaಸಂಪಿಗೆ ಮರ ತೆರವು ಮಾಡದಂತೆ ದೈವದ ಆದೇಶ: NHAI ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಸಂಪಿಗೆ ಮರ ತೆರವು ಮಾಡದಂತೆ ದೈವದ ಆದೇಶ: NHAI ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಮಂಗಳೂರು: ಪುರಾತನ ಸಂಪಿಗೆ ಮರವೊಂದನ್ನು ಕಡಿಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳಿಗೆ ದೈವವೊಂದು ಎಚ್ಚರಿಕ್ರೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ತುಳುನಾಡು ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಾರಾಧಾನೆಗೆ ಮಹತ್ವವಿದೆ. ದೈವದ ನುಡಿಗಳು ನಿಜವಾಗಿರುವ ಹಲವು ಉದಾಹರಣೆಗಳಿವೆ. ಇಂತಹ ಸಂದರ್ಭದಲ್ಲೇ ರಾಹುಗುಳಿಗ ದೈವ ಸಂಪಿಗೆ ಮರವೊಂದನ್ನು ತೆರವು ಮಾಡದಂತೆ ಆದೇಶ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ ಇರುವ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಆವರಣದ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರದ ವಿಚಾರವಾಗಿ ಕಾರ್ಣಿಕ ದೈವ ರಾಹುಗುಳಿಗ ಉಗ್ರ ಸ್ವರೂಪ ತಾಳಿ ಎಚ್ಚರಿಕೆ ನೀಡಿದೆ.

ನಂತೂರು ಸರ್ಕಲ್ ಬಳಿ ಸಾರಿಗೆ ದಟ್ಟಣೆ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಈ ಯೋಜನೆಯ ಭಾಗವಾಗಿ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರವನ್ನು ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಡಳಿತ ಮಂಡಳಿಗೆ ಸೂಚಿಸಿದ್ದರು. ಇತ್ತೀಚೆಗೆ ನಡೆದ ದೈವದ ನೇಮೋತ್ಸವದ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಈ ವಿಷಯವನ್ನು ದೈವದ ಎದುರು ಪ್ರಸ್ತಾಪಿಸಿದ್ದಾರೆ.

ಮರ ತೆರವಿನ ವಿಚಾರ ಕೇಳಿ ರಾಹುಗುಳಿಗ ದೈವ, “ಇದು ನನ್ನ ಮರ, ನನ್ನ ದೃಷ್ಟಿ ಅದರ ಮೇಲಿದೆ. ಅದನ್ನು ತೆರವುಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ” ಎಂದು ಎಚ್ಚರಿಸಿದೆ. ಅಲ್ಲದೇ ನೇರವಾಗಿ ಸಂಪಿಗೆ ಮರವನ್ನು ಹತ್ತಿ ಆದೇಶ ನೀಡಿದೆ. ಈ ಸಂಪಿಗೆ ಮರವು ದೈವಸ್ಥಾನಕ್ಕೆ ಸೇರಿದ ಪುರಾತನ ಮರವಾಗಿದೆ. ಹಿಂದಿನ ಕಾಲದಲ್ಲಿ ಈ ಮರದ ಕಟ್ಟೆಯಲ್ಲೇ ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು ಹಾಗೂ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು.

ಈ ಹಿಂದೆ ರಸ್ತೆ ಅಗಲೀಕರಣ ಮಾಡುವಾಗ ಮರವನ್ನು ತೆರವುಗೊಳಿಸದೇ ರಸ್ತೆ ನಿರ್ಮಿಸಲಾಗಿತ್ತು. ಆದರೆ ಆ ಭಾಗದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತಗಳನ್ನು ತಡೆಯುವ ಸಲುವಾಗಿ ಮರದಲ್ಲಿದ್ದ ರಾಹುಗುಳಿಗ ದೈವಕ್ಕೆ ದೈವಸ್ಥಾನದ ಆವರಣದಲ್ಲಿ ಪ್ರತ್ಯೇಕ ಗುಡಿ ನಿರ್ಮಿಸಿ ಪೂಜಿಸಲಾಯಿತು. ತದನಂತರ ಅಲ್ಲಿ ಅಪಘಾತಗಳು ನಿಂತುಹೋದವು. ಆದಾಗ್ಯೂ, ದೈವದ ದೃಷ್ಟಿ ಸಂಪಿಗೆ ಮರದ ಮೇಲೆಯೇ ಇತ್ತು ಎಂದು ಹೆಳಲಾಗುತ್ತಿದೆ.

ಈ ಹಿಂದೆ ಸ್ಥಳೀಯ ಕಾರ್ಪೊರೇಟರ್ ಒಬ್ಬರು ಈ ಮರವನ್ನು ತೆರವುಗೊಳಿಸಲು ಬಂದಾಗ ಬೃಹತ್ ನಾಗರಹಾವು ಪ್ರತ್ಯಕ್ಷವಾಗಿತ್ತು. ಆ ಬಳಿಕ ಅವರು ಸ್ಥಳದಿಂದ ತೆರಳಿದ್ದರು. ಇದೀಗ NHAI ಅಧಿಕಾರಿಗಳು ಮತ್ತೆ ಮರ ತೆರವುಗೊಳಿಸಲು ಮುಂದಾಗಿದ್ದು, ರಾಹುಗುಳಿಗ ದೈವ ಮರ ತೆರವು ಮಾಡದಂತೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಕ್ತ ಮನವರಿಕೆ ಮಾಡಿಕೊಡಬೇಕು ಎಂದು ಆಡಳಿತ ಮಂಡಳಿ ವಿನಂತಿಸಿದೆ. ಅಧಿಕಾರಿಗಳು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular