ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ವರ್ಷಗಳಿಂದ ಅಂಬಾರಿ ಹೊತ್ತು ಜನಮನ ಗೆದ್ದಿದ್ದ ‘ಕ್ಯಾಪ್ಟನ್ ಕಿಂಗ್’ ಅಭಿಮನ್ಯುವನ್ನು ಈ ಬಾರಿ ನಿಶಾನೆ ಆನೆಯಾಗಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಯ್ಕೆ ಮಾಡಲಾಗಿದೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು. ದಸರಾ ಗಜಪಡೆಯಿಂದಲೂ ಅಭಿಮನ್ಯುವನ್ನು ಕೈಬಿಡಲಾಗಿತ್ತು. ಆದರೆ ಕೋಟ್ಯಂತರ ಅಭಿಮಾನಿಗಳ ಒತ್ತಾಸೆ ಹಾಗೂ ಭಾವನೆಗಳಿಗೆ ಮನ್ನಣೆ ನೀಡಿ, ಹಿರಿಯ ಹಾಗೂ ಅನುಭವಿ ಅಭಿಮನ್ಯುವಿಗೆ ದಸರಾ ಮೆರವಣಿಗೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಅಭಿಮನ್ಯು ಹಲವು ವರ್ಷಗಳ ಕಾಲ ಮೈಸೂರು ದಸರೆಯ ಅಂಬಾರಿ ಹೊತ್ತು ನಾಡಿನ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ. ಆತನ ಶಾಂತ ಸ್ವಭಾವ, ಶಿಸ್ತು, ಧೈರ್ಯ ಹಾಗೂ ನಾಯಕತ್ವದ ಗುಣಗಳಿಂದಾಗಿ ‘ಕ್ಯಾಪ್ಟನ್’ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಾನೆ.
ಹಿರಿಯ ಆನೆಯಾಗಿ ದಸರಾ ಗಜಪಡೆಯಲ್ಲಿರುವ ಇತರ ಆನೆಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವೂ ಅಭಿಮನ್ಯುವಿಗಿದೆ. ಹೀಗಾಗಿ ನಿಶಾನೆ ಆನೆಯಾಗಿ ಅಭಿಮನ್ಯುವಿನ ಆಯ್ಕೆ ದಸರಾ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಮೂಲಕ ದಸರಾ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಸತತ ಆರು ಬಾರಿ ದಸರಾ ಕ್ಯಾಪ್ಟನ್ ಆಗಿ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು, ತನ್ನ ಶಿಸ್ತು, ಧೈರ್ಯ, ಗಾಂಭೀರ್ಯ ಮತ್ತು ಕರ್ತವ್ಯನಿಷ್ಠೆಯಿಂದ ನಾಡಿನ ಜನರ ಮನ ಗೆದ್ದಿದ್ದಾನೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು. 2026ರ ದಸರಾ ಗಜಪಡೆಯ ಆರಂಭಿಕ ಪಟ್ಟಿಯಲ್ಲಿ ಅಭಿಮನ್ಯುವಿನ ಹೆಸರು ಇಲ್ಲದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಇದೀಗ ಆತನಿಗೆ ನಿಶಾನೆ ಆನೆಯ ಸ್ಥಾನ ನೀಡುವ ಮೂಲಕ ಗೌರವಪೂರ್ವಕ ವಿದಾಯ ನೀಡಲು ಮುಂದಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಸಚಿವ ರಾಮಲಿಂಗಾ ರೆಡ್ಡಿ ಆದೇಶ
ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುದ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ.
ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚಿಗೆ ಆಯೋಜಿಸಲಾದ ಅಭಿಮನ್ಯು ಆನೆಯ ವಿದಾಯಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.
ಇದರ ಮುಂದುವರೆದ ಭಾಗವಾಗಿ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲೂ ಅಭಿಮನ್ಯುವನ್ನು ಹೆಮ್ಮೆಯಿಂದ ಹಾಗೂ ಗೌರವಪೂರ್ವಕವಾಗಿ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಈ ವರ್ಷದ ಉತ್ಸವದಲ್ಲಿ ಘನಉಪಸ್ಥಿತಿವಹಿಸಿ ವಿಶೇಷ ಸ್ಥಾನ ಕಲ್ಪಿಸುವುದು ಸೂಕ್ತವಾಗಿದೆ.
ಅಭಿಮನ್ಯುವಿನಂತಹ ದಸರಾ ಪರಂಪರೆಯ ಹೆಮ್ಮೆಯ ಆನೆಯ ಹಲವು ವರ್ಷಗಳ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ 2026ರ ಜಂಬೂಸವಾರಿಯಲ್ಲಿ ಗೌರವಪೂರ್ವಕವಾಗಿ ಉಪಸ್ಥಿತಿಗೊಳಿಸುವುದರಿಂದ ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರಗು ಬರಲಿದೆ.ಆದ್ದರಿಂದ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯು ಆನೆಯನ್ನು ನಿಶಾನೆ ಆನೆಯನ್ನಾಗಿಸಿ, ಇದರ ಸೇವೆಯನ್ನು ಸ್ಮರಿಸುವಂತೆ ಸೂಕ್ತ ವ್ಯವಸ್ಥೆ ಹಾಗೂ ಕ್ರಮ ಕೈಗೊಳ್ಳಲು ಕೋರಿದೆ.
ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಅಭಿಮನ್ಯು
ಜಂಬೂಸವಾರಿ ಮೆರವಣಿಗೆ ಆರಂಭಕ್ಕೂ ಮುನ್ನ ನಿಶಾನೆ ಆನೆ ಮುಂಚೂಣಿಯಲ್ಲಿ ಸಾಗುತ್ತದೆ. ಈ ಮೂಲಕ ಅಭಿಮನ್ಯು ಈ ಬಾರಿ ಅಂಬಾರಿ ಹೊರುವುದಿಲ್ಲವಾದರೂ, ದಸರಾ ಮೆರವಣಿಗೆಯಲ್ಲಿ ಪ್ರಮುಖ ಪಾತ್ರದೊಂದಿಗೆ ಕಾಣಿಸಿಕೊಳ್ಳಲಿದ್ದಾನೆ.
ಈ ಹಿಂದೆ ಅಂಬಾರಿ ಹೊತ್ತಿದ್ದ ಅರ್ಜುನ ಆನೆಗೂ ನಿವೃತ್ತಿಯ ಬಳಿಕ ನಿಶಾನೆ ಆನೆಯಾಗಿ ದಸರೆಯಲ್ಲಿ ಭಾಗವಹಿಸುವ ಗೌರವ ನೀಡಲಾಗಿತ್ತು. ಅದೇ ರೀತಿಯಲ್ಲಿ ಹಲವು ವರ್ಷಗಳ ಕಾಲ ದಸರೆಯ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿರುವ ಅಭಿಮನ್ಯುವಿಗೂ ಗೌರವಪೂರ್ವಕ ವಿದಾಯ ನೀಡಲು ನಿರ್ಧರಿಸಲಾಗಿದೆ.
ಅರಣ್ಯ ಕಾರ್ಯಾಚರಣೆಯಲ್ಲೂ ಅಭಿಮನ್ಯುವಿನ ಸಾಧನೆ
ಅಭಿಮನ್ಯು ಕೇವಲ ಮೈಸೂರು ದಸರೆಯ ಅಂಬಾರಿ ಆನೆಯಾಗಿ ಮಾತ್ರವಲ್ಲದೆ, ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲೂ ತನ್ನ ಸಾಮರ್ಥ್ಯ ತೋರಿಸಿದ್ದಾನೆ. ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದು ಹಾಗೂ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಅಭಿಮನ್ಯು ಪ್ರಮುಖ ಪಾತ್ರ ವಹಿಸಿದ್ದಾನೆ.
ಬೃಹದಾಕಾರದ ದೇಹ ಹೊಂದಿದ್ದರೂ ಅತ್ಯಂತ ಸೌಮ್ಯ ಸ್ವಭಾವದ ಅಭಿಮನ್ಯು ತನ್ನ ಮಾವುತರು ಮತ್ತು ಕಾವಾಡಿಗಳ ಮಾತನ್ನು ಶಿಸ್ತಿನಿಂದ ಪಾಲಿಸುತ್ತಿದ್ದ. ಇದೇ ಕಾರಣಕ್ಕೆ ಆತ ದಸರಾ ಅಭಿಮಾನಿಗಳ ಪಾಲಿಗೆ ಕೇವಲ ಆನೆಯಾಗಿರದೆ, ಮೈಸೂರು ದಸರೆಯ ಹೆಮ್ಮೆಯ ‘ಕ್ಯಾಪ್ಟನ್’ ಆಗಿ ಗುರುತಿಸಿಕೊಂಡಿದ್ದಾನೆ.
ಹೀಗಾಗಿ 2026ರ ಜಂಬೂಸವಾರಿಯಲ್ಲಿ ಅಭಿಮನ್ಯು ನಿಶಾನೆ ಆನೆಯಾಗಿ ಕಾಣಿಸಿಕೊಳ್ಳಲಿರುವುದು ದಸರಾ ಅಭಿಮಾನಿಗಳಿಗೆ ಭಾವನಾತ್ಮಕ ಹಾಗೂ ಸಂತಸದ ಕ್ಷಣವಾಗಲಿದೆ.

