ಸ್ವಂತ ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು ಮುಂದಾಗಿದ್ದೀರಾ? ಹೆಚ್ಚುತ್ತಿರುವ ಸಿಮೆಂಟ್, ಸ್ಟೀಲ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಬೆಲೆಗಳಿಂದ ಖರ್ಚು ಹೆಚ್ಚಾಗುತ್ತಿದೆ. ಆದರೆ ಸರಿಯಾದ ಪ್ಲಾನಿಂಗ್, ಎಂಜಿನಿಯರ್ ಸಲಹೆ ಹಾಗೂ ವಸ್ತುಗಳ ವ್ಯರ್ಥ ತಡೆ ಮೂಲಕ ಮನೆ ನಿರ್ಮಾಣ ವೆಚ್ಚದಲ್ಲಿ ಶೇ.10ರಿಂದ 20ರಷ್ಟು ಉಳಿತಾಯ ಮಾಡಬಹುದು. ಮನೆ ಕಟ್ಟುವವರು ಗಮನಿಸಬೇಕಾದ ಪ್ರಮುಖ ಸಲಹೆಗಳು ಇಲ್ಲಿವೆ.
ಯೆಸ್, ಸ್ವಂತ ಮನೆ ಕಟ್ಟಬೇಕು ಎಂಬುದು ಬಹುತೇಕ ಎಲ್ಲರ ಕನಸು. ಆದರೆ ಇಂದಿನ ದಿನಗಳಲ್ಲಿ ಮನೆ ನಿರ್ಮಾಣಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ನಿರ್ಮಾಣ ವೆಚ್ಚವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣದ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲು ತಜ್ಞರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಸರಿಯಾದ ಯೋಜನೆ ರೂಪಿಸಿಕೊಂಡು, ಸಿವಿಲ್ ಎಂಜಿನಿಯರಿಂಗ್ ತಜ್ಞರ ಮೇಲ್ವಿಚಾರಣೆಯಲ್ಲಿ ಮನೆ ನಿರ್ಮಿಸಿದರೆ ನಿರ್ಮಾಣ ವೆಚ್ಚದಲ್ಲಿ ಶೇ.10ರಿಂದ 20ರಷ್ಟು ಉಳಿತಾಯ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಪಕ್ಕಾ ಯೋಜನೆಯೊಂದಿಗೆ ಮುಂದುವರಿಯಿರಿ
ಮನೆ ನಿರ್ಮಿಸಲು ಕೇವಲ ಹಣವಿದ್ದರೆ ಸಾಕಾಗುವುದಿಲ್ಲ. ಸರಿಯಾದ ಯೋಜನೆ ರೂಪಿಸಿಕೊಂಡು ಮುಂದುವರಿಯುವುದು ಬಹಳ ಮುಖ್ಯ. ಇದರಿಂದ ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಬಜೆಟ್‌ನೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಇದರಲ್ಲಿ ಪ್ರಮುಖವಾದದ್ದು ಮನೆಯ ಪ್ಲಾನ್. ಸ್ವತಃ ಡ್ರಾಯಿಂಗ್ ಮಾಡುವುದು ಅಥವಾ ಸಂಪೂರ್ಣವಾಗಿ ಮೇಸ್ತ್ರಿಯನ್ನೇ ಅವಲಂಬಿಸುವ ಬದಲು ಅನುಭವ ಹೊಂದಿರುವ ಆರ್ಕಿಟೆಕ್ಟ್ ಮೂಲಕ ಮನೆಯ ಪ್ಲಾನ್ ಸಿದ್ಧಪಡಿಸಿಕೊಳ್ಳುವುದು ಉತ್ತಮ.
ಹಲವರು ಎಂಜಿನಿಯರ್‌ಗೆ ಶುಲ್ಕ ನೀಡುವುದು ಅನಗತ್ಯ ಎಂದು ಭಾವಿಸಿ ರೆಡಿಮೇಡ್ ಪ್ಲಾನ್‌ಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಎಂಜಿನಿಯರ್‌ರನ್ನು ಸಂಪರ್ಕಿಸಿದರೆ ಅವರು ನಿಮ್ಮ ನಿವೇಶನವನ್ನು ಪರಿಶೀಲಿಸಿ, ನಿಮ್ಮ ಅಗತ್ಯ ಹಾಗೂ ಆಲೋಚನೆಗಳಿಗೆ ಅನುಗುಣವಾಗಿ ವಿಶೇಷ ಪ್ಲಾನ್ ಸಿದ್ಧಪಡಿಸಬಹುದು.
ಸ್ಟ್ರಕ್ಚರಲ್ ಡಿಸೈನ್‌ನ ಮಹತ್ವ
ಎಂಜಿನಿಯರ್ ನೀಡುವ ಪ್ಲಾನ್‌ನ ಜೊತೆಗೆ ಸ್ಟ್ರಕ್ಚರಲ್ ಡಿಸೈನ್ ಪಡೆಯುವುದರಿಂದ ಅಡಿಪಾಯ, ಕಾಲಮ್‌ಗಳು, ಬೀಮ್‌ಗಳು ಎಲ್ಲಿ ಬರಬೇಕು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಎಷ್ಟು ಪ್ರಮಾಣದ ಸ್ಟೀಲ್, ಸಿಮೆಂಟ್, ಮರಳು ಹಾಗೂ ಇಟ್ಟಿಗೆಗಳು ಬೇಕಾಗುತ್ತವೆ ಎಂಬುದನ್ನೂ ಮುಂಚಿತವಾಗಿ ತಿಳಿದುಕೊಳ್ಳಬಹುದು.
ಇದರಿಂದ ನಿರ್ಮಾಣ ವೆಚ್ಚವನ್ನು ಅಂದಾಜಿಸಲು ಮತ್ತು ಅನಗತ್ಯ ವಸ್ತುಗಳ ವ್ಯರ್ಥವನ್ನು ತಪ್ಪಿಸಲು ಸಹಾಯವಾಗುತ್ತದೆ.ಕಾಲಮ್, ಬೀಮ್, ಸ್ಲ್ಯಾಬ್ ಅಥವಾ ಗೋಡೆಗಳನ್ನು ನಿರ್ಮಿಸಿದ ಬಳಿಕ ಬದಲಾವಣೆಗಳನ್ನು ಮಾಡುವುದು ಸಾಮಾನ್ಯ. ಗೋಡೆಗಳನ್ನು ಒಡೆಯುವುದು ಅಥವಾ ಸ್ಲ್ಯಾಬ್‌ಗಳನ್ನು ತೆಗೆದುಹಾಕುವುದು ಮುಂತಾದ ಕೆಲಸಗಳಿಂದ ಹೆಚ್ಚುವರಿ ಖರ್ಚು ಉಂಟಾಗುತ್ತದೆ. ಆದ್ದರಿಂದ ಎಂಜಿನಿಯರ್ ನೀಡಿರುವ ಪ್ಲಾನ್ ಪ್ರಕಾರವೇ ನಿರ್ಮಾಣ ಮಾಡುವಂತೆ ಮೇಸ್ತ್ರಿಗೆ ಸ್ಪಷ್ಟವಾಗಿ ತಿಳಿಸಬೇಕು.
ನಿರ್ಮಾಣ ಸಾಮಗ್ರಿಗಳ ವ್ಯರ್ಥ ತಪ್ಪಿಸಿ
ಮನೆ ನಿರ್ಮಾಣದ ವೆಚ್ಚ ಕಡಿಮೆ ಮಾಡುವಲ್ಲಿ ನಿರ್ಮಾಣ ಸಾಮಗ್ರಿಗಳ ವ್ಯರ್ಥವನ್ನು ತಡೆಯುವುದು ಪ್ರಮುಖ ಪಾತ್ರ ವಹಿಸುತ್ತದೆ.ಸಿಮೆಂಟ್ ಪ್ಲಾಸ್ಟರಿಂಗ್ ಮಾಡುವಾಗ ಸಾಮಾನ್ಯವಾಗಿ ಶೇ.10ರಿಂದ 20ರಷ್ಟು ವಸ್ತು ವ್ಯರ್ಥವಾಗುತ್ತದೆ. ಇದನ್ನು ಶೇ.8ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಕೆಳಗೆ ಬಿದ್ದ ಸಿಮೆಂಟ್‌ನ್ನು ಮರುಬಳಕೆ ಮಾಡಬಹುದು.
ಟೈಲ್ಸ್‌ಗಳ ವ್ಯರ್ಥವೂ ಶೇ.2ಕ್ಕಿಂತ ಕಡಿಮೆ ಇರುವಂತೆ ಎಚ್ಚರಿಕೆ ವಹಿಸಬೇಕು.ಸ್ಲ್ಯಾಬ್ ಹಾಗೂ ಫ್ಲೋರಿಂಗ್ ಕೆಲಸಗಳಲ್ಲಿ ಕಾಂಕ್ರೀಟ್ ವ್ಯರ್ಥವಾಗದಂತೆ ನೋಡಿಕೊಂಡು, ಉಳಿದ ವಸ್ತುಗಳನ್ನು ಲಿಂಟೆಲ್, ಸನ್‌ಶೇಡ್ ಮುಂತಾದ ಕೆಲಸಗಳಲ್ಲಿ ಬಳಸಿಕೊಳ್ಳುವಂತೆ ಯೋಜನೆ ರೂಪಿಸಬಹುದು.
ಇಟ್ಟಿಗೆಗಳೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಡೆದ ಇಟ್ಟಿಗೆಗಳನ್ನೂ ಅಗತ್ಯವಿರುವ ಸ್ಥಳಗಳಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬಹುದು.ಮರಳಿನ ವಿಚಾರದಲ್ಲೂ ಅಗತ್ಯಕ್ಕೆ ಅನುಗುಣವಾಗಿ ರೋಬೋ ಸ್ಯಾಂಡ್ ಅಥವಾ ನದಿ ಮರಳನ್ನು ಬಳಸುವ ಮೂಲಕ ವೆಚ್ಚ ಕಡಿಮೆ ಮಾಡಬಹುದು.
ನಿರ್ಮಾಣ ವಿಧಾನದಲ್ಲೂ ಹಣ ಉಳಿಸಬಹುದು
ಎಲೆಕ್ಟ್ರಿಕಲ್ ಪೈಪ್‌ಗಳನ್ನು ಗೋಡೆಗಳ ಒಳಗೆ ಅಳವಡಿಸುವ ಬದಲು ಸಾಧ್ಯವಾದಷ್ಟು ಸ್ಲ್ಯಾಬ್‌ನಲ್ಲಿಯೇ ಅಳವಡಿಸುವುದರಿಂದ ಖರ್ಚು ಕಡಿಮೆ ಮಾಡಬಹುದು. ಗೋಡೆಗಳಲ್ಲಿ ಪೈಪ್‌ಗಳನ್ನು ಅಳವಡಿಸಲು ಹೆಚ್ಚಿನ ವೆಚ್ಚವಾಗಬಹುದು.
ಅದೇ ರೀತಿ ಪ್ಲಾಸ್ಟರಿಂಗ್‌ನ ದಪ್ಪ ಅಗತ್ಯಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ವೈರಿಂಗ್ ಎಲ್ಲಿ ಮಾಡಬೇಕು ಎಂಬುದನ್ನೂ ಮೊದಲೇ ನಿಖರವಾಗಿ ಯೋಜಿಸಿಕೊಂಡರೆ ವಸ್ತುಗಳ ವ್ಯರ್ಥವನ್ನು ಕಡಿಮೆ ಮಾಡಬಹುದು.
ಪ್ರಸ್ತುತ ಮನೆ ನಿರ್ಮಾಣಕ್ಕೆ ಕನಿಷ್ಠ ಪ್ರತಿ ಚದರ ಅಡಿಗೆ ₹2,000ರಿಂದ ₹2,200 ವೆಚ್ಚವಾಗುತ್ತದೆ ಎಂದು ವರದಿ ತಿಳಿಸಿದೆ. ಗುಣಮಟ್ಟದ ಬ್ರಾಂಡೆಡ್ ಸಿಮೆಂಟ್, ಸ್ಟೀಲ್, ಎಲೆಕ್ಟ್ರಿಕಲ್ ಫಿಟ್ಟಿಂಗ್‌ಗಳು, ಸ್ಯಾನಿಟರಿ ಸಾಮಗ್ರಿಗಳು ಹಾಗೂ ಪೇಂಟಿಂಗ್ ಬಳಸಿದರೆ ಪ್ರತಿ ಚದರ ಅಡಿಗೆ ₹2,500ರಿಂದ ₹3,000 ವರೆಗೆ ವೆಚ್ಚವಾಗಬಹುದು.
ಆದರೆ ತಜ್ಞರು ನೀಡಿರುವ ಸಲಹೆಗಳನ್ನು ಪಾಲಿಸಿದರೆ ಪ್ರತಿ ಚದರ ಅಡಿಗೆ ₹200ರಿಂದ ₹300ರವರೆಗೆ ಉಳಿತಾಯ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಮಾರುಕಟ್ಟೆ ಪರಿಶೀಲನೆ ಮಾಡಿ ಖರೀದಿಸಿ
ನಿರ್ಮಾಣ ಸಾಮಗ್ರಿಗಳ ಬೆಲೆಗಳು ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಳಿತಗೊಳ್ಳುತ್ತಿರುತ್ತವೆ. ಕಂಪನಿಯನ್ನು ಅವಲಂಬಿಸಿ ಒಂದು ಸಿಮೆಂಟ್ ಚೀಲದ ಬೆಲೆ ₹320ರಿಂದ ₹475 ವರೆಗೆ ಇರಬಹುದು.ಇತ್ತೀಚೆಗೆ ಸಿಮೆಂಟ್ ಮೇಲಿನ GST ಶೇ.10ರಷ್ಟು ಕಡಿಮೆಯಾಗಿರುವುದರಿಂದ ಪ್ರತಿ ಚದರ ಅಡಿಗೆ ₹25ರಿಂದ ₹30ರವರೆಗೆ ಉಳಿತಾಯವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಸ್ಟೀಲ್‌ನ ಒಂದು ಟನ್ ಬೆಲೆ ಸುಮಾರು ₹54,000ರಿಂದ ₹67,000 ವರೆಗೆ ಇದೆ. ಬ್ರಾಂಡೆಡ್ ಸ್ಟೀಲ್‌ನ ಬೆಲೆ ಇದಕ್ಕಿಂತಲೂ ಹೆಚ್ಚಿರಬಹುದು.ಹೀಗಾಗಿ ಮಾರುಕಟ್ಟೆಯಲ್ಲಿ ಯಾವ ಸ್ಥಳದಲ್ಲಿ ನಿರ್ಮಾಣ ಸಾಮಗ್ರಿಗಳು ಕಡಿಮೆ ಬೆಲೆಗೆ ಲಭ್ಯವಿವೆ ಎಂಬುದನ್ನು ಪರಿಶೀಲಿಸಿ, ಸರಿಯಾದ ಸಮಯದಲ್ಲಿ ಸಾಮಗ್ರಿಗಳನ್ನು ಖರೀದಿಸುವ ಮೂಲಕ ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಸಮಗ್ರ ಯೋಜನೆ, ಸರಿಯಾದ ಮೇಲ್ವಿಚಾರಣೆ ಮತ್ತು ನಿರ್ಮಾಣ ಸಾಮಗ್ರಿಗಳ ಸಮರ್ಪಕ ಬಳಕೆಯ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸ್ವಂತ ಮನೆಯನ್ನು ನಿರ್ಮಿಸುವ ಕನಸನ್ನು ನನಸು ಮಾಡಿಕೊಳ್ಳಬಹುದು.

