ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಮತ್ತು ಪಾರದರ್ಶಕ ಶಿಕ್ಷಣ ವ್ಯವಸ್ಥೆಗೆ ಆಗ್ರಹಿಸಿ ಕಳೆದ ಜುಲೈ 21 ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಸಂಸತ್ ಚಲೋ’ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಹಲ್ಲೆಯಿಂದ ಹಲವು ವಿದ್ಯಾರ್ಥಿಗಳು ರಕ್ತಸಿಕ್ತಗೊಂಡಿದ್ದರು. ಈ ಘಟನೆಯನ್ನು ದೇಶದಾದ್ಯಂತ ವಕೀಲರು, ಹೋರಾಟಗಾರರು ಹಾಗೂ ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿದ್ದವು.
ಇದೀಗ, ಇಷ್ಟು ದಿನಗಳ ಕಾಲ ಮೌನಕ್ಕೆ ಶರಣಾಗಿದ್ದ ಬಾಲಿವುಡ್ ಸಿನಿಮಾ ರಂಗದಿಂದಲೂ ಧ್ವನಿ ಎದ್ದಿದ್ದು, ಮೆಗಾಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ವಿದ್ಯಾರ್ಥಿಗಳ ಪರವಾಗಿ ಬಹಿರಂಗ ಬೆಂಬಲ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ನಲ್ಲಿ ಸಲ್ಮಾನ್ ಖಾನ್ ಸುದೀರ್ಘ ಪೋಸ್ಟ್:
ಸಾಮಾಜಿಕ ಜಾಲತಾಣ Xನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ:
ಪ್ರತಿಭಟನೆಯು ಅತ್ಯಂತ ಶಾಂತಿಯುತವಾಗಿ ಸಾಗುತ್ತಿತ್ತು. ಆದರೆ ಅದು ಹಿಂಸಾತ್ಮಕ ರೂಪ ಪಡೆದುಕೊಂಡದ್ದು ನನಗೆ ತೀವ್ರ ದುಃಖ ತರಿಸಿದೆ. ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ, ಎಂದು ಬರೆದುಕೊಂಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಚಾರ ಮುಂದುವರಿದು ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಬದ್ಧತೆಯನ್ನು ಶ್ಲಾಘಿಸಿದ ಅವರು:
ಪೋಷಕರ ಬೆಂಬಲಕ್ಕೆ ಪ್ರಶಂಸೆ: ಪ್ರಶ್ನೆ ಪತ್ರಿಕೆ ಸೋರಿಕೆ (Paper Leak) ಎಂಬುದು ಸಣ್ಣ ವಿಷಯವಲ್ಲ, ಅದು ಅತ್ಯಂತ ಗಂಭೀರ ಸಂಗತಿ. ನಮ್ಮ ದೇಶದ ಮಕ್ಕಳು ಉತ್ತಮ ಹಾಗೂ ಪಾರದರ್ಶಕ ಶಿಕ್ಷಣ ವ್ಯವಸ್ಥೆಗಾಗಿ ಒಗ್ಗೂಡಿದ್ದಾರೆ ಮತ್ತು ಅವರ ಪೋಷಕರು ಈ ಹೋರಾಟವನ್ನು ಬೆಂಬಲಿಸಿದ್ದಾರೆ. ವಿದ್ಯಾರ್ಥಿಗಳು ತೆಗೆದುಕೊಂಡ ಈ ದಿಟ್ಟ ನಿಲುವನ್ನು ನಾನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.”
ಶಾಂತಿಯುತ ಹೋರಾಟದ ಧೈರ್ಯ: “ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ, ಭವಿಷ್ಯಕ್ಕಾಗಿ ‘ವಿದ್ಯಾವಂತ ಭಾರತ’ ನಿರ್ಮಿಸುವ ನಿಟ್ಟಿನಲ್ಲಿ ತೋರುತ್ತಿರುವ ಬದ್ಧತೆ ಮೆಚ್ಚುವಂಥದ್ದು. ಈ ಹೋರಾಟಕ್ಕೆ ಶಾಂತಿಯುತ ಪ್ರತಿಭಟನೆಯೇ ಸರಿಯಾದ ಮಾರ್ಗವಾಗಿತ್ತು. ಅವರು ಪ್ರದರ್ಶಿಸಿದ ಧೈರ್ಯ ಶ್ಲಾಘನೀಯ.”
ರಾಜಕೀಯಗೊಳಿಸದಂತೆ ಮನವಿ: ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಈ ಹೊಸ ಪೀಳಿಗೆ ಭಾರತಕ್ಕೆ ಹೆಮ್ಮೆ ತರುತ್ತದೆ. ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಇದನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಈ ಹೋರಾಟದ ಪೂರ್ಣ ಶ್ರೇಯಸ್ಸು ವಿದ್ಯಾರ್ಥಿಗಳಿಗೇ ಸಲ್ಲಬೇಕು.
ಶಿಕ್ಷಣವೇ ಮುಂದಿನ ಫ್ಯಾಷನ್ ಹಾಗೂ ಟ್ರೆಂಡ್
ಭಾರತದ ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಕುರಿತು ಮಾತನಾಡಿದ ಸಲ್ಮಾನ್ ಖಾನ್, “ನಮ್ಮ ದೇಶವು ಶಿಕ್ಷಣದ ಪ್ರಮುಖ ಕೇಂದ್ರಸ್ಥಾನವಾಗುತ್ತಿದೆ (Education Hub). ವಿದೇಶಗಳಿಂದಲೂ ಜನರು ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದಾರೆ. ಶಿಕ್ಷಣವೇ ಮುಂದಿನ ಟ್ರೆಂಡ್ ಮತ್ತು ಫ್ಯಾಷನ್ ಆಗಿದೆ. ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಕಲ ಬೆಂಬಲವನ್ನು ನೀಡಿ, ಸರ್ಕಾರವು ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತಗೊಳಿಸಲಿದೆ ಎಂಬ ಪೂರ್ಣ ವಿಶ್ವಾಸ ನನಗಿದೆ,” ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‌ವುಡ್‌ನಿಂದಲೂ ಕೇಳಿಬಂದಿತ್ತು ಖಂಡನೆಯ ಧ್ವನಿ
ಘಟನೆ ನಡೆದ ದಿನವೇ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಕಿಶೋರ್ ಹಾಗೂ ಹೆಸರಾಂತ ಗೀತರಚನೆಕಾರ ಕವಿರಾಜ್ ಅವರು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಮತ್ತು ಹಿಂಸಾಚಾರವನ್ನು ತೀವ್ರವಾಗಿ ಪ್ರಶ್ನಿಸಿ, ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ.

