HomeKarnatakaಕಸ್ತೂರಿ ರಂಗನ್ ವರದಿ ಕುರಿತು ಸಕಲೇಶಪುರದಲ್ಲಿ ಸಿಎಂ ಸಂವಾದ: ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ...

ಕಸ್ತೂರಿ ರಂಗನ್ ವರದಿ ಕುರಿತು ಸಕಲೇಶಪುರದಲ್ಲಿ ಸಿಎಂ ಸಂವಾದ: ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ರೈತರ ಅಭಿಪ್ರಾಯ ತಿಳಿಸುತ್ತೇವೆ ಎಂದು ಭರವಸೆ

ಸಕಲೇಶಪುರ: ಕಸ್ತೂರಿ ರಂಗನ್ ವರದಿ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಿದ ಬಳಿಕ ಶಾಸಕರು, ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೋಯ್ದು ರೈತರ ಅಭಿಪ್ರಾಯವನ್ನು ಮುಟ್ಟಿಸುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಪಿಎಂಸಿ ಯಾರ್ಡ್ ಅವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಅಧಿಸೂಚನೆ ಹೊರಡಿಸಿ ಸೆ.27ರ ಒಳಗೆ ಉತ್ತರ ನೀಡುವಂತೆ ನಮಗೆ ಸೂಚಿಸಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ವರದಿ ತಿರಸ್ಕರಿಸಿದ್ದೆವು. ಈ ಮಧ್ಯೆ ಅಕ್ಕ ಪಕ್ಕ ರಾಜ್ಯಗಳು ಕೆಲವು ಕ್ರಮಗಳ ಮೂಲಕ ತಿದ್ದುಪಡಿ ಮಾಡಿ ಬದಲಾವಣೆ ತಂದಿವೆ. ನಿಮ್ಮ ಪರವಾಗಿ, ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಹೇಳಿದರು.

ಅರಣ್ಯ ಅಧಿಕಾರಿಗಳು ರೈತರಿಗೆ ನೋಟೀಸ್ ಕೊಟ್ಟು ಕಿರುಕುಳ ನೀಡಬಾರದು. ಜನ ಭಯದ ವಾತಾವರಣದಲ್ಲಿ ಬದುಕಬಾರದು ಎಂದು ಮಾರ್ಗದರ್ಶನ ನೀಡಿರುವೆ. ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲಾಗುವುದು. ಅರಣ್ಯ ಹಕ್ಕು ಕಾಯ್ದೆಯಲ್ಲಿ ಬುಡಕಟ್ಟು ಜನರಿಗೆ 25 ಹಾಗೂ ಇತರರಿಗೆ 75 ವರ್ಷಗಳ ಮಿತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಆಗ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ನಾಯಕರು ಯಾವ ರೀತಿ ಸಹಕಾರ ನೀಡುತ್ತಾರೆ ನೋಡೋಣ ಎಂದು ಹೇಳಿದರು.

ರೈತನಿಗೆ ವೇತನ, ಬಡ್ತಿ, ನಿವೃತ್ತಿ, ಪಿಂಚಣಿ, ಲಂಚ ಯಾವುದೂ ಇಲ್ಲ. ರೈತರ ಹಿತ ಕಾಪಾಲು ಕಸ್ತೂರಿ ರಂಗನ್ ವಿಚಾರವಾಗಿ ನಿಮ್ಮ ಅಭಿಪ್ರಾಯ ಕೇಳಲು ಬಂದಿರುವೆ. ಭೌತಿಕ ಸಮೀಕ್ಷೆ ಮಾಡಬೇಕು ಎಂದು ಸಲಹೆ ನೀಡಿದ್ದೀರಿ. ನಿಮ್ಮ ಭಾವನೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಬೇರೆ ಶಾಸಕರ ಅಭಿಪ್ರಾಯ ಕೇಳುವೆ. ಮತ್ತೆ ಕೆಲವರು ಸಾರಾಸಗಟಾಗಿ ತಿರಸ್ಕರಿಸಿ ಎಂದಿದ್ದಾರೆ. ಆ ರೀತಿ ಮಾಡಿದರೆ ಏನಾಗುತ್ತದೆ ಆಲೋಚನೆ ಮಾಡಬೇಕು. ಗ್ರಾಮ ಸಭೆ, ಸೂಕ್ಷ್ಮ ಪರಿಸರ ವಲಯ, ವಲಯ ನಿರ್ವಹಣೆ ಯೋಜನೆ ಬಗ್ಗೆ ಸಲಹೆ ನೀಡಿದ್ದಾರೆ. ಭೂಮಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಈ ಹಕ್ಕನ್ನು ರಾಜ್ಯಕ್ಕೆ ನೀಡಬೇಕು ಎಂದು ಪ್ರಸ್ತಾಪಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಇದರ ಜೊತೆಗೆ ಅಕ್ರಮ ಸಕ್ರಮ, ಬಗರ್ ಹುಕ್ಕುಂ, ಅರಣ್ಯ ಹಕ್ಕು ಅರ್ಜಿ ವಿಲೇವಾರಿ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಸರ್ಕಾರ ಆದ್ಯತೆ ನೀಡಲಾಗುವುದು. ನಾವು ತೇಗದ ಸಿರಿ ಕಾರ್ಯಕ್ರಮ ತಂದಿದ್ದೇವೆ. ರಸ್ತೆ ಬದಿಯಲ್ಲಿ ಸರ್ಕಾರ ತೇಗದ ಮರ ನೀಡಿ ಅದನ್ನು ಬೆಳೆಸಲು ರೈತರಿಗೆ ಜವಾಬ್ದಾರಿ ನೀಡಲಾಗುವುದು. ಕಟಾವು ಬಂದಾಗ ಆದಾಯದಲ್ಲಿ 70% ರೈತರಿಗೆ 30% ಸರ್ಕಾರಕ್ಕೆ ಬರಲಿದೆ. ರೈತರ ಬದುಕಿನಲ್ಲಿ ಶಕ್ತಿ ತುಂಬಲು ಇಂತಹ ಯೋಜನೆ ರೂಪಿಸಲಾಗಿದೆ ಎಂದರು.

ಬಿಜೆಪಿಯವರು ಅಧಿವೇಶನದಲ್ಲಿ ಬರ, ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡದೇ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಾಲಹರಣ ಮಾಡಿದರು. ನಾನು ಅಧಿವೇಶನ ಮೋಟಕುಗೊಳಿಸಿ ರಾಜ್ಯದ ನಮ್ಮ ಶಾಸಕರು ಹಾಗೂ ಸಂಸದರ ಸಭೆ ಮಾಡಿದೆ. ಆಗ ಜನಪ್ರತಿನಿಧಿಗಳು ಇದರ ಮಹತ್ವದ ವಿವರಿಸಿದರು. ನಾನು ರಾಜೀನಾಮೆ ಪಡೆದ ಬಳಿಕ ಪಾದಯಾತ್ರೆ ಮಾಡಿದರು. ಆ ಮೂಲಕ ರಾಜಕೀಯ ಹೆಚ್ಚು ಎಂದು ತೋರಿಸಿದ್ದಾರೆ. ನಾನು ಇದಕ್ಕಾಗಿ ವಿಶೇಷ ಅಧಿವೇಶನ ಕರೆದಿದ್ದೇನೆ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾನು ಬದುಕಿನ ಮೇಲೆ ರಾಜಕಾರಣ ಮಾಡಲು ಜನರ ಬಳಿ ಬಂದಿದ್ದೇನೆ. ನಿಮ್ಮ ನೋವು, ಸಮಸ್ಯೆ ಆಲಿಸಲು ಬಂದಿದ್ದೇನೆ. ವಿಧಾನ ಸೌಧದಲ್ಲಿ ಚರ್ಚೆ ಮಾಡುವ ಮುನ್ನ ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದು ತಿಳಿಸಿದರು.

ಎಲ್ಲಾ ಶಾಸಕರು ಉತ್ತಮ ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಜನರ ನೋವು ಅರಿತು ಪರಿಹಾರ ನೀಡಲು ಪ್ರಜಾಸೇವೆ ಇಲಾಖೆ ಆರಂಭಿಸಿರುವೆ. ಶಾಸಕರು ಸಭೆಯಲ್ಲಿ ಭಾಗವಹಿಸದೆ ಇದ್ದರೂ ಜಿಲ್ಲಾ ಮಂತ್ರಿಗಳು ತಿಂಗಳಿಗೆ 2 ದಿನ 2 ತಾಲ್ಲೂಕಿಗೆ ಹೋಗಬೇಕು. ಶಾಸಕರು ಜನರ ಬಳಿ ಹೋಗದೆ ಇದ್ದರೆ ಅಧಿಕಾರಿಗಳು ಹೋಗಬೇಕು. ನಂತರ ಹೋಬಳಿ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಅನೇಕರು ಉತ್ತಮ ಸಲಹೆ ನೀಡಿದ್ದಾರೆ. ನಮ್ಮ ಹಿಂದಿನ ಸರ್ಕಾರಗಳು ಉಳುವವನಿಗೆ ಭೂಮಿ, ಬಗರ್ ಹುಕ್ಕುಂ ಸಾಗುವಳಿ ಭೂಮಿ ನೀಡಿದೆ. ರೈತರಿಗೆ ಸಹಾಯ ಮಾಡಲು ಅನೇಕ ಅಡಚಣೆ ಇದೆ. 94c ಸೇರಿದಂತೆ ಅನೇಕ ಸಮಸ್ಯೆ ಇದೆ. ರೈತರ ಭೂಮಿಗೆ ಖಾತಾ ಸೇರಿದಂತೆ ಸೂಕ್ತ ದಾಖಲೆ ನೀಡಲು ನಿಮ್ಮ ಸರ್ಕಾರ ಕೈಗೊಂಡಿದೆ. ಇದಕ್ಕೆ ಯಾರೂ ಲಂಚ ನೀಡಬಾರದು. ಲಂಚ ಮುಕ್ತ ರಾಜ್ಯ ಮಾಡುವುದು, ನಮ್ಮ ದೃಢ ಕರ್ನಾಟಕದ ಸಂಕಲ್ಪ. ಕೆಲವರು ನಾನು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ನಾನು ಸಚಿವ ಸಂಪುಟ ಮಾಡಿದರೂ ಟೀಕೆ, ನಡೆದರೂ ಟೀಕಿಸುತ್ತಾರೆ. ಅವರು ಮಾಡಲಿ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದರು.

ಕಳೆದ ಐದು ದಿನಗಳಲ್ಲಿ ಕಲಬುರ್ಗಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಪ್ರವಾಸ ಮಾಡುತ್ತಿರುವೆ. ಮಂಗಳೂರಿನಲ್ಲಿ ಯುವಕರು ವಲಸೆ ತಪ್ಪಿಸಿ ಅಲ್ಲೇ ಉದ್ಯೋಗ ಸೃಷ್ಟಿಸಲು ಪ್ರವಾಸೋದ್ಯಮ ನೀತಿ ರೂಪಿಸಿದೆ. ಮಲೆನಾಡಿನಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಕರಾವಳಿ ಜೊತೆಗೆ ಮಲೆನಾಡು ಭಾಗಕ್ಕೆ ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ತಲೆಮಾರುಗಳಿಂದ ನಿಮ್ಮ ಭೂಮಿ ಕಾಪಾಡುತ್ತಿದ್ದೀರಿ. ನೀವು ಹೊಸದಾಗಿ ಒತ್ತುವರಿ ಮಾಡಬೇಡಿ. ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡಿರುವವರು ನ. 01ರ ಒಳಗೆ ಸರ್ಕಾರಕ್ಕೆ ಒಪ್ಪಿಸಿ. ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಂದ ಇತ್ತೀಚಿಗೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ನಿಮಗೆ ಅಗತ್ಯ ಇದ್ದರೆ ಸರ್ಕಾರ ಪರವಾನಗಿ ನೀಡಲಿದೆ. ಅಕ್ರಮವಾಗಿ ಬಂದೂಕು ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಜಯ್ ಕುಮಾರ್ ಎಂಬ ಐಪಿಎಸ್ ಅಧಿಕಾರಿಗೆ ಅಧ್ಯಯನ ಮಾಡಲು ಸೂಚನೆ ನೀಡಲಾಗಿದ್ದು, 2027ರವರೆಗೆ ಕಾಲಾವಕಾಶ ನೀಡಲಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡುವೆ. ಗ್ಯಾರಂಟಿ ಯೋಜನೆ ನೀಡಿ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ. ಬಿಜೆಪಿ ಸ್ನೇಹಿತರು ತಮ್ಮ ಅವಧಿಯಲ್ಲಿ ಮಾಡಿರುವ ಸಾಧನೆ ಹೇಳಲಿ. ದೇವರು ವರ, ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ನನಗೆ ಸಿಕ್ಕ ಅವಕಾಶದಲ್ಲಿ ನಾನು ಸೇವೆ ಮಾಡುವೆ. ಮಾನವ ಪ್ರಾಣಿ ಸಂಘರ್ಷ, ಅಡಿಕೆ ಬೆಲೆ ಕುಸಿತ, ತೆರಿಗೆ ವಿಚಾರವಾಗಿ ಬಗ್ಗೆ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ನನಗೆ ಎಷ್ಟು ದಿನ ಸಮಯ ಇದೆಯೋ, ನಿಮ್ಮ ವಿಶ್ವಾಸ ಇರುವಷ್ಟು ದಿನ ನಿಮ್ಮ ಸೇವೆ ಮಾಡುವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular