ಬೆಂಗಳೂರು: ಟಿ.ನರಸೀಪುರ ಗಣೇಶೋತ್ಸವ ಹಾಗೂ ಶೋಭಾಯಾತ್ರೆ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಚೋದನಕಾರಿ ಭಾಷಣ ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಪ್ರತಾಪ್ ಸಿಂಹ ಇದಕ್ಕೆಲ್ಲ ಹೆದರಲ್ಲ, ಕಾನೂನು ಪ್ರಕಾರ ಎಲ್ಲವನ್ನೂ ಎದುರಿಸುತ್ತಾರೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಪ್ರತಾಪ್ ಸಿಂಹ ವಿರುದ್ಧ 25 ಕೇಸ್ ಗಳಿವೆ. ಇದು ಮತ್ತೊಂದು ಕೇಸ್ ಅಷ್ಟೇ. ಇದಕ್ಕೆಲ್ಲ ಅವರು ಹೆದರುವುದಿಲ್ಲ. ಯಾವ ಕಾರಣಕ್ಕೂ ನಾವು ಈ ವಿಚಾರದಲ್ಲಿ ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿದರು.
ಗಣ್ರೇಶೋತ್ಸವ ಮಾಡಲು ಮುಂದಾದವರ ಮೇಲೆ ಟಿ.ನರಸೀಪುರದ ಇನ್ಸ್ ಫೆಕ್ಟರ್ ಧಮ್ಕಿ ಹಾಕಿದ್ದಾರೆ. ಇನ್ಸ್ ಪೆಕ್ಟರ್ ಮೇಲೆ ನಾಲ್ಕು ಕೇಸ್ ಗಳಿವೆ. ರೇಪ್ ಕೇಸ್ ಇದೆ, ದಲಿತರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಎರಡು ಕೇಸ್ ಗಳಿವೆ. ಭ್ರಷ್ಟಾಚಾರದ ಕೇಸ್ ಇದೆ. ಹೀಗಿರುವಾಗ ಅಂತಹ ಇನ್ಸ್ ಪೆಕ್ಟರ್ ಅಮಾನತುಗೊಳಿಸಿ ಎಂದರೆ ಸಿಎಂ ಡಿ.ಕೆ.ಶಿವಕುಮಾರ್, ಇನ್ಸ್ ಪೆಕ್ಟರ್ ನಮ್ಮ ಸಹೋದರ ಎಂಬ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಂಗ್ರೆಸ್ ಸರ್ಕಾರ ಇನ್ನು ಎಷ್ಟು ದಿನ ದಬ್ಬಾಳಿಕೆ ಮಾಡಬಹುದು? ಇಂತಹ ದುರಾಡಳಿತವನ್ನು ನಡೆಸಲಿದೆ? ಹೆಚ್ಚು ಎಂದರೆ ಒಂದು ವರ್ಷ ಅಷ್ಟೇ. ಆನಂತರ ಮತ್ತೆ ಚುನಾವಣೆ ಬರಲಿದೆ. ಆಗ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಇವರ ದಬ್ಬಾಳಿಕೆ, ಧಮ್ಕಿ ಯಾವುದೂ ನಡೆಯಲ್ಲ ಎಂದು ಕಿಡಿಕಾರಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು
ಮೈಸೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಟಿ.ನರಸೀಪುರದಲ್ಲಿ ಗಣೇಶ ಮೂರ್ತಿ ಕೂರಿಸುವ ವಿಚಾರಕ್ಕೆ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿಗೆ ಸವಾಲಾಗಿ ನಡೆದ ಶೋಭಾಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಈ ಹಿನ್ನೆಲೆ ಪ್ರತಾಪ್ ಸಿಂಹ ಮತ್ತು ಇತರರ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 132, 191, 194, 196(1)(ಎ)(ಬಿ), 299, 353(1)(ಬಿ)(ಸಿ) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಾರ್ವಜನಿಕ ಸೇವಕರು ಮತ್ತು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಹಾಗೂ ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷ ಉತ್ತೇಜನೆ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮತ್ತು ಪ್ರಚೋದನಕಾರಿ ಭಾಷಣಗಳ ಆರೋಪ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

