HomeFeatured Newsರೈಲಿನ ಎಸಿ ಕೋಚ್‌ ನಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ಶೀಟ್ ಮಾಯ ; RTI ನಲ್ಲಿ...

ರೈಲಿನ ಎಸಿ ಕೋಚ್‌ ನಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ಶೀಟ್ ಮಾಯ ; RTI ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !

ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ (AC Coaches) ಪ್ರಯಾಣಿಸುವ ಪ್ರಯಾಣಿಕರ ಕೈಚಳಕ ಈಗ ತಲೆತಗ್ಗಿಸುವಂತೆ ಮಾಡಿದೆ. ರೈಲ್ವೆ ಇಲಾಖೆ ನೀಡುವ ಸೌಕರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಯಾಣಿಕರು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಡ್‌ರೋಲ್ ಸಾಮಗ್ರಿಗಳನ್ನು ಕದ್ದು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ (RTI) ಲಭ್ಯವಾಗಿರುವ ಆಘಾತಕಾರಿ ದತ್ತಾಂಶಗಳ ಪ್ರಕಾರ, ಜನವರಿ 2022 ರಿಂದ ಮೇ 2026 ರ ನಡುವಿನ ಅವಧಿಯಲ್ಲಿ ರೈಲುಗಳಿಂದ ಬರೋಬ್ಬರಿ 1.27 ಕೋಟಿಗೂ ಅಧಿಕ ಬೆಡ್‌ಶೀಟ್, ಬ್ಲಾಂಕೆಟ್ ಮತ್ತು ಟವಲ್‌ಗಳು ಕಳ್ಳತನವಾಗಿವೆ!

ಪ್ರತಿ ಸಾವಿರ ಎಸಿ ಪ್ರಯಾಣಿಕರಲ್ಲಿ ಕನಿಷ್ಠ ಒಬ್ಬರು ರೈಲ್ವೆಯ ಇಂತಹ ಸಾಮಗ್ರಿಗಳನ್ನು ಕದಿಯುತ್ತಿದ್ದು, ಇದರಿಂದ ಉಂಟಾಗಿರುವ ಒಟ್ಟು ನಷ್ಟದ ಮೊತ್ತ ಬರೋಬ್ಬರಿ 104.51 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2022 ಕ್ಕೆ ಹೋಲಿಸಿದರೆ 2025 ರ ವೇಳೆಗೆ ಇಂತಹ ಕಳ್ಳತನ ಪ್ರಕರಣಗಳು ಶೇಕಡಾ 56 ರಷ್ಟು ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

ಕಳ್ಳರ ಮೊದಲ ಚಾಯ್ಸ್ ‘ಫೇಸ್ ಟವಲ್’!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳ್ಳತನವಾಗಿರುವ ಸಾಮಗ್ರಿಗಳ ಪಟ್ಟಿಯನ್ನು ಗಮನಿಸಿದರೆ ಪ್ರಯಾಣಿಕರು ಸುಲಭವಾಗಿ ಬ್ಯಾಗ್‌ನಲ್ಲಿ ಬಚ್ಚಿಡಬಹುದಾದ ಸಣ್ಣ ಟವಲ್‌ಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದಾರೆ.

  • ಫೇಸ್ ಟವಲ್‌ಗಳು: 46.54 ಲಕ್ಷ

  • ಬೆಡ್‌ಶೀಟ್‌ಗಳು: 41.13 ಲಕ್ಷ

  • ಪಿಲ್ಲೋ ಕವರ್‌ಗಳು: 23.59 ಲಕ್ಷ

  • ಬ್ಲಾಂಕೆಟ್‌ಗಳು (ಕಂಬಳಿ): 12.95 ಲಕ್ಷ

  • ದಿಂಬುಗಳು: 2.76 ಲಕ್ಷ

ರಾಜಸ್ಥಾನ ಟಾಪ್, ದಕ್ಷಿಣ ಭಾರತದಲ್ಲಿ ಶೂನ್ಯ ಕಳ್ಳತನ !

ರೈಲ್ವೆಯ 54 ವಿಭಾಗಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ದೇಶದ ಒಟ್ಟು ಕಳ್ಳತನದಲ್ಲಿ ಶೇಕಡಾ 67 ರಷ್ಟು ಪಾಲು ಕೇವಲ 10 ರೈಲ್ವೆ ವಿಭಾಗಗಳಲ್ಲೇ ನಡೆಯುತ್ತಿದೆ. ಇದರಲ್ಲಿ ರಾಜಸ್ಥಾನದ ಬಿಕಾನೇರ್ ವಿಭಾಗ 25.76 ಲಕ್ಷ ಸಾಮಗ್ರಿಗಳನ್ನು ಕಳೆದುಕೊಂಡು ಮೊದಲ ಸ್ಥಾನದಲ್ಲಿದ್ದರೆ, ರಾಂಚಿ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ. ಮುಂಬೈ, ಅಹಮದಾಬಾದ್ ಮತ್ತು ಬಿಹಾರದ ದಾನಾಪುರದಲ್ಲೂ ಭಾರಿ ಪ್ರಮಾಣದ ಕಳ್ಳತನ ವರದಿಯಾಗಿದೆ.

ಆದರೆ, ಈ ವರದಿಯಲ್ಲಿ ದಕ್ಷಿಣ ಭಾರತದ ಪ್ರಯಾಣಿಕರು ಮಾದರಿಯಾಗಿ ನಿಂತಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿ ಮತ್ತು ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗಗಳಲ್ಲಿ ಒಂದೇ ಒಂದು ಕಳ್ಳತನ ಪ್ರಕರಣ ಕೂಡ ವರದಿಯಾಗಿಲ್ಲ ಎಂಬುದು ಹೆಮ್ಮೆಯ ಸಂಗತಿ. ಇತ್ತ ದೆಹಲಿ ವಿಭಾಗವು ತನ್ನ ಕಟ್ಟುನಿಟ್ಟಿನ ಕ್ರಮಗಳಿಂದ ಕಳ್ಳತನವನ್ನು ಶೇಕಡಾ 79 ರಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪ್ರಯಾಣಿಕರ ಪಾಪಕ್ಕೆ ಬಡ ಕಾರ್ಮಿಕರ ಬಲಿ !

ರೈಲ್ವೆ ಇಲಾಖೆಯು ಬೆಡ್‌ರೋಲ್ ಪೂರೈಕೆಯ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುತ್ತದೆ. ಹೀಗೆ ಸಾಮಗ್ರಿಗಳು ಕಳ್ಳತನವಾದಾಗ ರೈಲ್ವೆ ಇಲಾಖೆಯು ಗುತ್ತಿಗೆದಾರರ ಬಿಲ್‌ನಿಂದ ಹಣವನ್ನು ಕಡಿತಗೊಳಿಸುತ್ತದೆ (ಉದಾಹರಣೆಗೆ ಒಂದು ಬ್ಲಾಂಕೆಟ್‌ಗೆ 343 ರೂ, ಬೆಡ್‌ಶೀಟ್‌ಗೆ 198 ರೂ.).

ಆದರೆ ಅಸಲಿ ದುರಂತವೆಂದರೆ, ಗುತ್ತಿಗೆದಾರರು ಈ ನಷ್ಟವನ್ನು ಸರಿದೂಗಿಸಲು ರೈಲಿನಲ್ಲಿ ದಿನಕ್ಕೆ ಕೇವಲ 700 ರೂಪಾಯಿ ದಿನಗೂಲಿಗೆ ದುಡಿಯುವ ಬಡ ಅಟೆಂಡೆಂಟ್‌ಗಳ (Linen Attendants) ಸಂಬಳವನ್ನು ಕಡಿತಗೊಳಿಸುತ್ತಿದ್ದಾರೆ! “ಪ್ರತಿ ತಿಂಗಳು ನಮ್ಮ ಜವಾಬ್ದಾರಿಯಲ್ಲಿ ಮಿಸ್ ಆಗುವ ಸಾಮಗ್ರಿಗಳಿಗೆ ಎಂದು ನಮ್ಮ ಸಂಬಳದಲ್ಲಿ 2,000 ದಿಂದ 3,000 ರೂಪಾಯಿ ಕಟ್ ಮಾಡಲಾಗುತ್ತಿದೆ. ಪ್ರಯಾಣಿಕರ ಕಳ್ಳತನಕ್ಕೆ ನಾವು ಬೆಲೆ ತೆರುತ್ತಿದ್ದೇವೆ,” ಎಂದು ಪೂರ್ವ ಮಧ್ಯ ರೈಲ್ವೆಯ ಅಟೆಂಡೆಂಟ್ ಒಬ್ಬರು ಅಳಲು ತೋಡಿಕೊಂಡಿದ್ದಾರೆ.

ರೈಲ್ವೆ ಇಲಾಖೆಯ ತಲೆನೋವು

ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಸಚಿವಾಲಯದ ವಕ್ತಾರರು, “ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಕಳ್ಳತನ ತಡೆಯಲು ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಇದರಲ್ಲಿ ರೈಲ್ವೆ ಸಿಬ್ಬಂದಿಯ ಶಾಮೀಲಾತಿ ಇರುವುದಕ್ಕೆ ಯಾವುದೇ ಪುರಾವೆಗಳಿಲ್ಲ,” ಎಂದು ತಿಳಿಸಿದ್ದಾರೆ. ನಿರಂತರ ಕಳ್ಳತನದಿಂದಾಗಿ ರೈಲ್ವೆ ಇಲಾಖೆಯು ಪದೇ ಪದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಬೆಡ್‌ಶೀಟ್ ಸೆಟ್‌ಗಳನ್ನು ಖರೀದಿಸಬೇಕಾಗಿ ಬಂದಿದ್ದು, ಇದು ಸಾರ್ವಜನಿಕ ಹಣದ ಪೋಲಿಗೆ ಕಾರಣವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular