ಕಲಬುರಗಿ: ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಅಮಾನತು ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.
ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾ ಸಾಹೇಬ ದೇಶಮುಖ ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಕಲಬುರಗಿ ಕೆಎಟಿ (ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ) ತಡೆಯಾಜ್ಞೆ ನೀಡಿದೆ.
2025ರ ಅಕ್ಟೋಬರ್ 10ರಂದಯ ನಡೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಕಲಬುರಗಿ ಜಿಲ್ಲೆಯ ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಗುರುರಾಜ ಜೋಶಿ ಹಾಗೂ ಕುಪ್ಪಿ ಶಾಲೆಯ ಶಿಕ್ಷಕ ಅಣ್ಣಾ ಸಾಹೇಬ ದೇಶಮುಖ ಗಣಾವೇಶ ಧರಿಸಿ ಪಾಲ್ಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಶಿಕ್ಷಕರನ್ನು ಅಮಾನತು ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಸಾಕ್ಷರತಾ ಇಲಾಖೆ ಡಿಡಿ ಚನ್ನಬಸ್ಸಪ್ಪ ಮಧೋಳ ಆಗಸ್ಟ್ 20ರಂದು ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.
ತಮ್ಮ ಅಮಾನತು ಆದೇಶ ಪ್ರಶ್ನಿಸಿ ಇಬ್ಬರು ಶಿಕ್ಷಕರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಕಲಬುರಗಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಶಿಕ್ಷಕರ ಅಮಾನತು ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?
2025ರ ಅ.12ರಂದು ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ಹಾಗೂ 2025 ಅ.10ರಂದು ಹುಣಸಗಿಯಲ್ಲಿ ನಡೆದಿದ್ದ ಆರ್.ಎಸ್.ಎಸ್. ಪಥಸಂಚಲನದಲ್ಲಿ ಪಥಸಂಚಲನದಲ್ಲಿ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾ ಸಾಹೇಬ ದೇಶಮುಖ ಭಾಗಿಯಾಗಿದ್ದರು ಎಂಬ ಆರೋಪವಿತ್ತು.
ಈ ಹಿನ್ನೆಲೆಯಲ್ಲಿ ಇಲಾಖೆ ಕಾರಣ ಕೇಳಿ ಶಿಕ್ಷಕರಿಬ್ಬರಿಗೆ ನೋಟಿಸ್ ನೀಡಿತ್ತು. ಸರ್ಕಾರಿ ನೌಕರರಾದ ಇವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಜುಮ್ಮಣ್ಣ ಗುಡಿಮನಿ, ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರಿದ್ದರು. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂತಹ ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗಿರುವಂತಿಲ್ಲ, ಚಳವಳಿಯಲ್ಲಿ ಭಾಗವಹಿಸುವಂತಿಲ್ಲ ಎಂದು ಇಲಾಖೆ ನೋಟಿಸ್ ನೀಡಿತ್ತು. ಅಲ್ಲದೇ ಸಚಿವ ಮಧು ಬಂಗಾರಪ್ಪ ಸೂಚನೆ ಮೇರೆಗೆ, ಕಲಬುರಗಿ ಅಪರ ಆಯುಕ್ತರ ಕಚೇರಿ ಕ್ರಮಕ್ಕೆ ಸೂಚಿಸಿತ್ತು.
ಕಾರಣ ಕೇಳಿ ನೋಟಿಸಿಗೆ ಉತ್ತರಿಸಿದ್ದ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾಸಾಹೇಬ ದೇಶಮುಖ, ಆರ್.ಎಸ್.ಎಸ್ ಪಥಸಂಚಲನವು ಕೆಲಸದ ವೇಳೆಯಲ್ಲಿ ನಡೆದಿಲ್ಲ, ಅದು ರಾಜಕೀಯ ಕಾರ್ಯಕ್ರಮ ಆಗಿರಲಿಲ್ಲ, ಕಾರ್ಯಕ್ರಮ ರವಿವಾರ ನಡೆದಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದರಿಂದ ಭಾಗವಹಿಸಿದ್ದೇವು ಎಂದು ತಿಳಿಸಿದ್ದರು. ಆದರೆ, ಈ ಉತ್ತರ ಸಮಂಜಸವಲ್ಲ ಎಂಬ ಕಾರಣ ನೀಡಿ, ಜವಾಬ್ದಾರಿಯುತ ಶಿಕ್ಷಕರ ಹುದ್ದೆಯಲ್ಲಿದ್ದು, ಸಮಾಜಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮಾದರಿ ಆಗಬೇಕಾದ ನೀವು, ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣಾ ಕಾಯ್ದಿರಿಸಿ ಅಮಾನತು ಮಾಡಲಾಗಿತ್ತು.

