ಶಾಲೆಯಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ಗಂಭೀರ ಆರೋಪ ಎದುರಿಸುತ್ತಿರುವ 30 ವರ್ಷದ ಬ್ರಿಟಿಷ್ ದೈಹಿಕ ಶಿಕ್ಷಣ (PE) ಶಿಕ್ಷಕಿಯೊಬ್ಬರ ವಿರುದ್ಧದ ವಿಚಾರಣೆ ಇಂಗ್ಲೆಂಡ್‌ನ ವಿಂಚೆಸ್ಟರ್ ಕ್ರೌನ್ ನ್ಯಾಯಾಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇಬ್ಬರೂ ಖಾಸಗಿಯಾಗಿ ಏಕಾಂತದಲ್ಲಿದ್ದಾಗಲೂ ಆಕೆ ವಿದ್ಯಾರ್ಥಿಗೆ ತನ್ನನ್ನು “ಮಿಸ್” (ಶಿಕ್ಷಕಿ) ಎಂದೇ ಕರೆಯುವಂತೆ ಸೂಚಿಸುತ್ತಿದ್ದಳು ಎಂದು ಸರ್ಕಾರಿ ಅಭಿಯೋಜಕರು ಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಸೌತಾಂಪ್ಟನ್‌ನ ಬಿಟರ್ನ್ ಪಾರ್ಕ್ ಶಾಲೆಯಲ್ಲಿ ಕ್ರೀಡಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ರಾನ್ವೆನ್ ಜೇಮ್ಸ್ (30) ಎಂಬಾಕೆಯ ವಿರುದ್ಧ ಅಪ್ರಾಪ್ತನೊಂದಿಗೆ ಅಕ್ರಮ ಲೈಂಗಿಕ ಸಂಬಂಧ ಹೊಂದಿದ ಆರೋಪದಡಿ ನಾಲ್ಕು ಪ್ರತ್ಯೇಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆದರೆ ಆಕೆ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾಳೆ.
ಸ್ನ್ಯಾಪ್‌ಚಾಟ್‌ನಿಂದ ಶುರುವಾದ ಸಂಬಂಧ:
ಕೋರ್ಟ್‌ನಲ್ಲಿ ಪ್ರಾಸಿಕ್ಯೂಟರ್ ಎಡ್ವರ್ಡ್ ಕಲ್ವರ್ ಮಂಡಿಸಿದ ವಾದದ ಪ್ರಕಾರ, ಆರಂಭದಲ್ಲಿ ವಿದ್ಯಾರ್ಥಿ ಸಾಮಾಜಿಕ ಜಾಲತಾಣವಾದ ಸ್ನ್ಯಾಪ್‌ಚಾಟ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಾಗ ಶಿಕ್ಷಕಿ ತಿರಸ್ಕರಿಸಿದ್ದಳು. ಆದರೆ ನಂತರ ಆತನ ರಿಕ್ವೆಸ್ಟ್ ಸ್ವೀಕರಿಸಿ, ಇಬ್ಬರ ನಡುವೆ ಖಾಸಗಿ ಸಂದೇಶಗಳ ವಿನಿಮಯ ಆರಂಭವಾಗಿತ್ತು. ಈ ಸಂದೇಶಗಳು ಕಾಲಕ್ರಮೇಣ ಪ್ರೇಮ ಸಲ್ಲಾಪದ ರೂಪ ಪಡೆದುಕೊಂಡಿದ್ದವು.
ಬಳಿಕ ಇಬ್ಬರೂ ವೆಸ್ಟನ್ ಶೋರ್ ಎಂಬ ಸ್ಥಳಕ್ಕೆ ಕಾರಿನಲ್ಲಿ ತೆರಳಿ ಪರಸ್ಪರ ಕಿಸ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಮತ್ತೊಂದು ಸಂದರ್ಭದಲ್ಲಿ ಟೆಲಿವಿಷನ್‌ನಲ್ಲಿ ವಿಂಬಲ್ಡನ್ ಟೆನಿಸ್ ಪಂದ್ಯ ವೀಕ್ಷಿಸುತ್ತಿದ್ದಾಗ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು ಎಂದು ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಶಿಕ್ಷಕಿ ವಿದ್ಯಾರ್ಥಿಗೆ “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಾವಿಬ್ಬರೂ ಜೊತೆಯಾಗಿ ಎಲ್ಲಾದರೂ ದೂರ ಹೋಗೋಣ” ಎಂದೂ ಹೇಳಿದ್ದಳು ಎಂದು ಆರೋಪಿಸಲಾಗಿದೆ.
ಏಕಾಂತದಲ್ಲೂ ಮಿಸ್ ಅಂತಲೇ ಕರೆಯಬೇಕಿತ್ತು !
ಅಭಿಯೋಜಕರ ಪ್ರಕಾರ, ಇಬ್ಬರೂ ಖಾಸಗಿಯಾಗಿ ಒಬ್ಬರನ್ನೊಬ್ಬರು ಭೇಟಿಯಾದಾಗಲೂ ವಿದ್ಯಾರ್ಥಿ ಆಕೆಯನ್ನು “ಮಿಸ್” ಎಂದೇ ಸಂಬೋಧಿಸಬೇಕೆಂದು ಆಕೆ ಬಯಸುತ್ತಿದ್ದಳು.
ಕೋರ್ಟ್‌ನಲ್ಲಿ ಹೇಳಿಕೆ ನೀಡಿರುವ ಆ ಬಾಲಕ, “ಆರಂಭದಲ್ಲಿ ಈ ಸಂಬಂಧ ನನಗೆ ಒಳ್ಳೆಯದೆಂದೇ ಅನ್ನಿಸಿತ್ತು. ಆದರೆ ನಂತರದ ದಿನಗಳಲ್ಲಿ ಶಿಕ್ಷಕಿ ನನ್ನನ್ನು ವ್ಯವಸ್ಥಿತವಾಗಿ ಲೈಂಗಿಕವಾಗಿ ಬಳಸಿಕೊಳ್ಳಲು ಬಲೆಗೆ ಬೀಳಿಸಿದ್ದರು (Groomed) ಎಂಬುದು ನನಗೆ ಅರ್ಥವಾಯಿತು,” ಎಂದು ಕಣ್ಣೀರಾಗಿದ್ದಾನೆ.
ಆರೋಪ ನಿರಾಕರಿಸಿದ ಶಿಕ್ಷಕಿ, ವಿಚಾರಣೆ ಮುಂದೂಡಿಕೆ:
ಬಾಲಕನೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪಗಳನ್ನು ಶಿಕ್ಷಕಿ ಬ್ರಾನ್ವೆನ್ ಜೇಮ್ಸ್ ಸಂಪೂರ್ಣವಾಗಿ ನಿರಾಕರಿಸಿದ್ದು, ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದಾಳೆ.
ಬುಧವಾರದಂದು ಜ್ಯೂರಿ ಸದಸ್ಯರ ವಿಸರ್ಜನೆಯಿಂದಾಗಿ ವಿಚಾರಣೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ಹೊಸ ಜ್ಯೂರಿ ಸದಸ್ಯರ ಪ್ರಮಾಣವಚನದೊಂದಿಗೆ ಗುರುವಾರ ವಿಚಾರಣೆ ಮುಂದುವರಿಯಲಿದೆ. ಬ್ರಿಟನ್‌ನಲ್ಲಿ ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವಿನ ಈ ಅಕ್ರಮ ಸಂಬಂಧದ ಪ್ರಕರಣ ಇದೀಗ ಶಿಕ್ಷಣ ವಲಯದಲ್ಲಿ ತೀವ್ರ ಕಳವಳ ಮತ್ತು ಚರ್ಚೆಗೆ ಕಾರಣವಾಗಿದೆ.

