ಬೆಂಗಳೂರು: ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯುವ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು ಆನ್ಲೈನ್ ಟಾಸ್ಕ್ ಹೆಸರಲ್ಲಿ 1.21 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಹೆಚ್.ಬಿ.ಆರ್. ಲೇಔಟ್ ನಿವಾಸಿ ಭರತ್ ಕುಮಾರ್ ವಂಚನೆಗೊಳಗಾಗಿದ್ದು, ಪೂರ್ವ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2024ರ ಜನವರಿಯಲ್ಲಿ ಭರತ್ ಕುಮಾರ್ ಅವರ ವಾಟ್ಸಾಪ್ ಗೆ ಲಿಂಕ್ ಒಂದು ಬಂದಿತ್ತು. ಅದರಲ್ಲಿ ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ರೂ. 3000 ಲಾಭ ಪಡೆಯಬಹುದು ಎಂದು ಆಮಿಷವೊಡ್ಡಲಾಗಿತ್ತು. ಇದನ್ನು ನಂಬಿದ ಭರತ್ ಕುಮಾರ್ ಟಾಸ್ಕ್ ಗಳನ್ನು ಸ್ವೀಕರಿಸಿ ಹಣ ಹೂಡಿಕೆ ಮಾಡುತ್ತಿದ್ದರು.
ಆರಂಭದಲ್ಲಿ ಸಣ್ಣ ಪುಟ್ಟ ಟಾಸ್ಕ್ ಗಳನ್ನು ನೀಡಿ ಹೆಚ್ಚಿನ ಲಾಭ ನೀಡುವ ಮೂಲಕ ವಂಚಕರು ನಂಬಿಸಿದ್ದರು. ನಂತರ ಭರತ್ ಹೂಡಿಕೆಯ ಹಣ ಹೆಚ್ಚು ಮಾಡಿದ್ದರು. ಇದನ್ನು ಬಳಸಿಕೊಂಡ ವಂಚಕರು ಕಮಿಷನ್ ಹೆಚ್ಚಳ ಮಾಡಿ ಕಳೆದ ತಿಂಗಳು ಮೇ 26ರವರೆಗೂ 1.21 ಕೋಟಿ ರೂ. ಹೂಡಿಕೆ ಮಾಡಿಸಿದ್ದರು. ನಂತರ ಲಾಭ ನೀಡದೆ ಸಂಪರ್ಕದಿಂದ ದೂರವಾಗಿದ್ದಾರೆ. ತಾನು ಮೋಸ ಹೋಗಿರುವ ಬಗ್ಗೆ 1930 ಪೋರ್ಟಲ್ ನಲ್ಲಿ ಭರತ್ ಕುಮಾರ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

