HomeLatest News10 ಗಂಟೆ, 10 ಲಕ್ಷ ಸದಸ್ಯರು ಹೊಸ ಇತಿಹಾಸ ಸೃಷ್ಟಿಸಿದ ಅಣ್ಣಾಮಲೈ ಇಧು ನಮ್ಮ ಇಯಕ್ಕಂ...

10 ಗಂಟೆ, 10 ಲಕ್ಷ ಸದಸ್ಯರು ಹೊಸ ಇತಿಹಾಸ ಸೃಷ್ಟಿಸಿದ ಅಣ್ಣಾಮಲೈ ಇಧು ನಮ್ಮ ಇಯಕ್ಕಂ ಜನಾಂದೋಲನ :ಜನರ ಬೆಂಬಲಕ್ಕೆ ಧನ್ಯವಾದ ಹೇಳಿದ ಸಿಂಗಂ

ಬೆಂಗಳೂರು: ತಮಿಳುನಾಡು ರಾಜಕಾರಣದಲ್ಲಿ ಸದಾ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ ಕೆಲವೇ ಗಂಟೆಗಳಲ್ಲಿ ಹೊಸದೊಂದು ಜನಪರ ಚಳುವಳಿಗೆ ಮುನ್ನುಡಿ ಬರೆದಿದ್ದಾರೆ. ಅವರು ಆರಂಭಿಸಿರುವ ಇಧು ನಮ್ಮ ಇಯಕ್ಕಂ (ಇದು ನಮ್ಮ ಚಳವಳಿ) ಮತ್ತು ವಿ ದಿ ಲೀಡರ್ (We The Leader) ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ

ಶುಕ್ರವಾರವಷ್ಟೇ ಔಪಚಾರಿಕವಾಗಿ ಬಿಜೆಪಿಯನ್ನು ತೊರೆದ ಅಣ್ಣಾಮಲೈ ಅವರ ಈ ತಳಮಟ್ಟದ ನಾಯಕತ್ವದ ಹೊಸ ಆಂದೋಲನಕ್ಕೆ ತಮಿಳುನಾಡಿನಲ್ಲಿ ಭಾರಿ ಜನಾಂದೋಲನ ಸೃಷ್ಟಿಯಾಗಿದ್ದು, ಇದರ ಕ್ರೇಜ್ ಈಗ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ.

ಟ್ವಿಟರ್‌ನಲ್ಲಿ (X) ಧನ್ಯವಾದ ತಿಳಿಸಿದ ಅಣ್ಣಾಮಲೈ

ಈ ಐತಿಹಾಸಿಕ ಬೆಂಬಲದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, “ನಮ್ಮ ರಾಜಕೀಯ ಆಂದೋಲನವು ಅತಿ ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಯಿಸಿಕೊಂಡಿದ್ದಾರೆ. ಈ ಅಸಾಧಾರಣ ಪ್ರತಿಕ್ರಿಯೆಯು ನಮ್ಮ ದೃಷ್ಟಿಕೋನ ಮತ್ತು ಸಾಮೂಹಿಕ ಧ್ಯೇಯದಲ್ಲಿ ಜನರು ಇಟ್ಟಿರುವ ನಂಬಿಕೆಯ ಪ್ರಬಲ ಪ್ರತಿಬಿಂಬವಾಗಿದೆ. ಈ ಆಂದೋಲನದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬೆಂಬಲಿಗರು

ಕೆ. ಅಣ್ಣಾಮಲೈ ಅವರ ಇಧು ನಮ್ಮ ಇಯಕ್ಕಂ ಆಂದೋಲನದ ಯಶಸ್ಸು ಮತ್ತು ಬಲವರ್ಧನೆಗಾಗಿ ಅವರ ಬೆಂಬಲಿಗರು ಹಾಗೂ ಸ್ವಯಂಸೇವಕರು ಕಾಂಚೀಪುರಂನ ಪ್ರಸಿದ್ಧ ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಶುಕ್ರವಾರವಷ್ಟೇ ಅಣ್ಣಾಮಲೈ ಅವರು ನೀಡಿದ್ದ ಪಕ್ಷದ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿರುವ ಅಣ್ಣಾಮಲೈ, ತಮಿಳುನಾಡಿನ ಭವಿಷ್ಯದ ಬಗ್ಗೆ ತಮಗಿರುವ ವಿಭಿನ್ನ ರಾಜಕೀಯ ಅಭಿಪ್ರಾಯಗಳ ಕಾರಣಕ್ಕೇ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಆದರ್ಶ, ಮೌಲ್ಯಗಳನ್ನು ಹೊಂದಿರುವ ಹೊಸ ಪಕ್ಷದ ಉದಯ

ಮುಂದಿನ ರಾಜಕೀಯ ನಡೆಗಳ ಬಗ್ಗೆ ಮಾತನಾಡಿರುವ ಅಣ್ಣಾಮಲೈ, ತಮಿಳುನಾಡಿನಲ್ಲಿ ಹೊಸ ಆದರ್ಶಗಳ ರಾಜಕೀಯ ಪಕ್ಷಕ್ಕೆ ಖಂಡಿತವಾಗಿಯೂ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನಾವು ಮೌಲ್ಯಗಳನ್ನು ಹೊಂದಿರುವ ಹೊಸ ಪಕ್ಷ ಕಟ್ಟುತ್ತೇವೆ. ತಮಿಳುನಾಡಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಖಂಡಿತವಾಗಿ ಸ್ಪರ್ಧಿಸುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ” ಎಂದು ಅಣ್ಣಾಮಲೈ ಘೋಷಿಸಿದ್ದಾರೆ.

ಅಬ್ದುಲ್ ಕಲಾಂ ಹೆಸರಲ್ಲಿ ಭವಿಷ್ಯದ ನಾಯಕರಿಗೆ ತರಬೇತಿ

ಅಣ್ಣಾಮಲೈ ಅವರ ಹೊಸ ರಾಜಕೀಯ ಯೋಜನೆಯ ಪ್ರಮುಖ ಹಂತಗಳು ಇಲ್ಲಿವೆ:

ಡಿಜಿಟಲ್ ನೋಂದಣಿ: ಆಂದೋಲನದ ಸದಸ್ಯರ ನೋಂದಣಿಗಾಗಿ www.wetheleader.org ವೆಬ್‌ಸೈಟ್ ಅನ್ನು ಮರುಪ್ರಾರಂಭಿಸಲಾಗಿದೆ.

ರಾಜಕೀಯ ತರಬೇತಿ ಕೇಂದ್ರ: ಕೊಯಮತ್ತೂರು ಜಿಲ್ಲೆಯಲ್ಲಿ ‘ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಪೊಲಿಟಿಕಲ್ ಎಥಿಕ್ಸ್’ (APJ Abdul Kalam Centre for Political Ethics) ಅನ್ನು ಸ್ಥಾಪಿಸಲಾಗುತ್ತಿದೆ.

ಅಭ್ಯರ್ಥಿಗಳ ಸಿದ್ಧತೆ: ಈ ಕೇಂದ್ರದ ಮೂಲಕ ಭವಿಷ್ಯದ ಪಕ್ಷದ ಪರವಾಗಿ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಮೊದಲು ವ್ಯವಸ್ಥಿತ ರಾಜಕೀಯ ಮತ್ತು ನೈತಿಕ ತರಬೇತಿ ನೀಡಿ, ನಂತರ ಚುನಾವಣೆಗೆ ತಯಾರು ಮಾಡಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular