HomeKarnatakaRohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಳ್ಳಾರಿ ಭೇಟಿ ವಿವಾದ, ಸ್ಪಷ್ಟನೆ

Rohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಳ್ಳಾರಿ ಭೇಟಿ ವಿವಾದ, ಸ್ಪಷ್ಟನೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಅವರು ಬಳ್ಳಾರಿ ಜಿಲ್ಲೆಗೆ ಡಿಸೆಂಬರ್ 25 ರಂದು ಭೇಟಿ ನೀಡಿದ್ದರು. ಡಿಸೆಂಬರ್ 28, 2025ರ ತನಕ ವಾಸ್ತವ್ಯ ಹೂಡಿದ್ದರು.

ಬಳ್ಳಾರಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಇತರೆ ಅಧಿಕಾರಿಗಳೊಂದಿಗೆ ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಅವರು ಸಭೆಗಳನ್ನು ಮಾಡಿದ್ದರು. ಆದರೆ ಈ ಭೇಟಿ ವೇಳೆ ಅವರು ಜನರನ್ನು, ಮನವಿ ಕೊಡಲು ಬಂದ ರೈತರನ್ನು ಭೇಟಿ ಮಾಡಿಲ್ಲ, ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿಲ್ಲ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಹಲವು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಆದ್ದರಿಂದ ಈ ಕುರಿತು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಪಷ್ಟನೆಗಳು; ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿರುವುದಿಲ್ಲ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಆಗಮಿಸುವ ಪೂರ್ವ ನಿಗದಿತ ಯೋಜನೆಗಳಿದ್ದಲ್ಲಿ ಈ ಕುರಿತು ಪೂರ್ವಭಾವಿಯಾಗಿಯೇ ಪತ್ರಿಕಾ ಪ್ರಕಟಣೆ ಮೂಲಕ ಪ್ರಚಾರ ನೀಡಿ ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಇಲಾಖೆಯ ಉಪನಿರ್ದೇಶಕ ದ್ವಿತೀಯ ಈ.ಸಿ. ತಿಳಿಸಿದ್ದಾರೆ.

ಯಾವುದೇ ವ್ಯಕ್ತಿ, ಸಂಘ ಅಥವಾ ಸಂಘಟನೆಗಳು ಯಾವುದೇ ಸಂದರ್ಭಗಳಲ್ಲಿಯೂ ತಮ್ಮ ಅಹವಾಲು, ಮನವಿ ಅಥವಾ ದೂರುಗಳನ್ನು ಸಲ್ಲಿಸಲು ಮುಕ್ತ ಅವಕಾಶಗಳಿವೆ. ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ, ಇಲಾಖಾ ಕಾರ್ಯದರ್ಶಿಗಳ ಈ ಭೇಟಿಯ ಸಂದರ್ಭದಲ್ಲಿ ಅಹವಾಲುಗಳನ್ನು ಸ್ವೀಕರಿಸುವ ಯಾವುದೇ ಪೂರ್ವನಿಯೋಜಿತ ಕಾರ್ಯಕ್ರಮ ನಿಗದಿಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಇಲಾಖಾ ಕಾರ್ಯದರ್ಶಿಗಳು ಅಹವಾಲುಗಳನ್ನು ಸ್ವೀಕರಿಸಿರುವುದಿಲ್ಲ ಮತ್ತು ಖಾಸಗಿ ಓಡಾಟಕ್ಕೆ ಸರ್ಕಾರಿ ವಾಹನ ಬಳಕೆ ಎಂಬುದಾಗಿ ಪ್ರಕಟವಾಗಿರುವ ಸುದ್ದಿಯು ತಪ್ಪು ಮಾಹಿತಿಯನ್ನು ಒಳಗೊಂಡಿದೆ. ಇಲಾಖಾ ಕಾರ್ಯದರ್ಶಿಗಳ ಈ ಪ್ರವಾಸವು ಪೂರ್ವ ನಿಗದಿತ ಅಧಿಕೃತ ಪ್ರವಾಸವಾಗಿದ್ದು, ಈ ಪ್ರವಾಸ ಕಾರ್ಯಕ್ಕೆ ಇಲಾಖಾ ಕಾರ್ಯದರ್ಶಿಗಳಿಗೆ ಮಂಜೂರಾಗಿರುವ ಅಧಿಕೃತ ವಾಹನವನ್ನೇ ಬಳಸಲಾಗಿದೆ. ಈ ರೀತಿಯ ತಪ್ಪು ಮಾಹಿತಿಯನ್ನು ನೀಡಿರುವಂತಹ ಸಂಘಟನೆಯವರು, ಮಾರ್ಗ ಮಧ್ಯೆ ಇಲಾಖಾ ಕಾರ್ಯದರ್ಶಿಗಳನ್ನು ಭೇಟಿಯಾದ ಸಂದರ್ಭದಲ್ಲಿಯೂ ಯಾವುದೇ ಅಹವಾಲು ಅಥವಾ ಮನವಿಯನ್ನು ಸಲ್ಲಿಸಿರುವುದಿಲ್ಲ.

ಯಾವುದೇ ವ್ಯಕ್ತಿ, ಸಂಘ ಅಥವಾ ಸಂಘಟನೆಗಳು ಯಾವುದೇ ಸಂದರ್ಭಗಳಲ್ಲಿಯೂ ತಮ್ಮ ಅಹವಾಲು, ಮನವಿ ಅಥವಾ ದೂರುಗಳನ್ನು ಸಲ್ಲಿಸಲು ಮುಕ್ತ ಅವಕಾಶವಿದೆ. ಇಲಾಖಾ ಕಾರ್ಯದರ್ಶಿಗಳ ಭೇಟಿಗೆ ಸಮಯ ಕೋರಿದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ರೋಹಿಣಿ ಸಿಂಧೂರಿ ಅವರು ಭಾನುವಾರ ಮೆ.ಎನ್‌ಎಂಡಿಸಿ ಲಿ. ನ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ:2396 ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಸೋಮವಾರ ತೋರಣಗಲ್ಲಿನ ಮೆ.ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ. ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ. ಡೌನ್‌ಹಿಲ್ ಪೈಪ್ಸ್ ಕನ್ವೇಯರ್ ವ್ಯವಸ್ಥೆ ಚಾಲ್ತಿಯಲ್ಲಿರುವ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 0006 (ದೇವದಾರಿ) ಗೆ ಭೇಟಿ ನೀಡಿ ಕಬ್ಬಿಣದ ಅದಿರು ಉತ್ಪಾದನೆ, ಸಂಸ್ಕರಣೆ ಮತ್ತು ಡೌನ್‌ಹಿಲ್ ಪೈಪ್ಸ್ ಕನ್ವೇಯರ್ ಮೂಲಕ ಸಾಗಾಣಿಕೆಯ ವಿಧಾನಗಳ ಕುರಿತು ಪರಿಶೀಲಿಸಿದ್ದಾರೆ.

ಮೆ.ಕೆಎಸ್‌ಎಂಸಿಎಲ್ (ಎಂಎಂಎಲ್) ಕಚೇರಿಗೆ ಭೇಟಿ ನೀಡಿ ಕಚೇರಿಗೆ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿದ ಅವರು, ಗಣಿಗಾರಿಕೆ, ಮಾದರಿಗಳ ಸಂಗ್ರಹಣೆ ಮತ್ತು ಮಾದರಿಗಳ ವಿಶ್ಲೇಷಣೆಗಾಗಿ ಪ್ರಯೋಗಾಲಯದ ವ್ಯವಸ್ಥೆ ಮತ್ತು ಇತರೆ ಸಂಬಂಧಿತ ವಿಷಯಗಳ ಕುರಿತಂತೆ ಮೆ.ಕೆಎಸ್‌ಎಂಸಿಎಲ್ ಸಂಸ್ಥೆಯ ಅಧಿಕಾರಿಗಳೊಂದಿಗೆ ರೋಹಿಣಿ ಸಿಂಧೂರಿ ಅವರು ಚರ್ಚಿಸಿದ್ದಾರೆ.

ಮಂಗಳವಾರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಂಡೂರು ತಾಲ್ಲೂಕಿನ ಸುಬ್ಬರಾಯನಹಳ್ಳಿ ವ್ಯಾಪ್ತಿಯಲ್ಲಿರುವ ಮೆ.ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (ಕೆಎಸ್‌ಎಂಸಿಎಲ್/ ಎಂಎಂಎಲ್) ದ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 2629 ರ ಪ್ರದೇಶಕ್ಕೆ ಭೇಟಿ ನೀಡಿ, ಕಬ್ಬಿಣದ ಅದಿರು ಉತ್ಪಾದನೆ, ಸಂಸ್ಕರಣೆ ಮತ್ತು ಸಾಗಾಣಿಕೆಯ ವಿಧಾನಗಳನ್ನು ಮತ್ತು ಇತರೆ ಸಂಬAಧಿತ ವಿಷಯಗಳ ಕುರಿತು ಪರಿಶೀಲನೆಯನ್ನು ನಡೆಸಿದ್ದಾರೆ.

ಬಳಿಕ ಕಾರ್ಯದರ್ಶಿಗಳು ಮೆ.ಸಂಡೂರು ಮ್ಯಾಂಗ್‌ನೀಸ್ ಮತ್ತು ಐರನ್ ಓರ್ಸ್ ಲಿ., (ಸ್ಮಯೋರ್) ನ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿ ಗುತ್ತಿಗೆ ಸಂಖ್ಯೆ: 2678/2580 ರ ಕಾಣಿಗೆ ಮರದ ಕೊಳ್ಳ (ಕೆಎಂಕೆ) ಬ್ಲಾಕ್ ಗೆ ಭೇಟಿ ನೀಡಿ ಮ್ಯಾಂಗನೀಸ್ ಅದಿರು ಉತ್ಪಾದನೆ, ಸಂಸ್ಕರಣೆ ಮತ್ತು ದಾಸ್ತಾನುಗಳ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ. ಮೆ.ಎನ್‌ಎಂಡಿಸಿ ಲಿ.ನ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 1111 (ಕುಮಾರಸ್ವಾಮಿ) ಗಣಿ ಗುತ್ತಿಗೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿ ಅಗತ್ಯ ಸೂಚನೆ ನೀಡಿದ್ದಾರೆ.

ಎನ್‌ಎಂಡಿಸಿ ಸಂಸ್ಥೆಯ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 1111 ರಿಂದ ಈ ಸಂಸ್ಥೆಯವರು ಅರಣ್ಯ ವಿಮೋಚನೆ ಪಡೆದಿರುವ ರಸ್ತೆ ಮೂಲಕ ಮೆ.ಎನ್‌ಎಂಡಿಸಿ ಲಿ., ನ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 2396 ಗೆ ತೆರಳುವ ಮಾರ್ಗ ಮಧ್ಯೆ ರೈತ ಸಂಘದವರು ಮೆ.ಎನ್‌ಎಂಡಿಸಿ ಲಿ., ನಂ ಸೆಕ್ಯೂರಿಟಿ ಗೇಟ್ ಬಳಿಯಲ್ಲಿ ಇಲಾಖಾ ಕಾರ್ಯದರ್ಶಿಗಳ ವಾಹನ ತಡೆದು, ಸಂಘಟನೆಯ ಸದಸ್ಯ ಶ್ರೀಶೈಲ ಆಲದಹಳ್ಳಿ ಎಂಬುವವರು ಮೆ.ಕೆಐಓಸಿಎಲ್ ಲಿ., ನ ಗಣಿ ಗುತ್ತಿಗೆ ಸಂಖ್ಯೆ: 20 ರ ಅವಧಿ ವಿಸ್ತರಣೆಯನ್ನು ಮಾಡದಂತೆ ಅಹವಾಲನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಚೇರಿಗೆ ರವಾನಿಸಲಾಗಿದೆ ಎಂದು ಕಾರ್ಯದರ್ಶಿಯವರಿಗೆ ತಿಳಿಸಿದರು.

ಎಫ್‌ಸಿ ಪಡೆದ ರಸ್ತೆಯಲ್ಲಿ ಎನ್‌ಎಂಡಿಸಿ ಲಿ., ಸಂಸ್ಥೆ ಸಾರ್ವಜನಿಕರಿಗೆ ಓಡಾಡಲು ಅವಕಾಶ ನೀಡದೇ ಇರುವುದರಿಂದ ಈ ಯಾರನ್ನೂ ರಸ್ತೆಯಲ್ಲಿ ತೆರಳಲು ಬಿಡುವುದಿಲ್ಲವೆಂದು ಕಾರ್ಯದರ್ಶಿಗಳ ಮುಂದಿನ ಪ್ರಯಾಣಕ್ಕೆ ತಡೆ ಒಡ್ಡಿದ್ದರು. ಕೇಂದ್ರೀಯ ಕೈಗಾರಿಕಾ ಸುರಕ್ಷತಾ ಪಡೆಯ ಸಿಬ್ಬಂದಿ, ಎನ್‌ಎಂಡಿಸಿ ಲಿ., ನ ಪ್ರತಿನಿಧಿಗಳು ಮತ್ತು ಇಲಾಖಾ ಅಧಿಕಾರಿಗಳು ಹಾಗೂ ಇಲಾಖಾ ಕಾರ್ಯದರ್ಶಿಗಳ ಮನವಿಗಳ ಹೊರತಾಗಿಯೂ ತೆರಳಲು ಅವಕಾಶ ಮಾಡಿಕೊಡಲು ಸಹಮತಿಸಿರುವುದಿಲ್ಲ.

ಇಲಾಖೆಗೆ ಯಾವುದೇ ಸಂಘಟನೆಯವರು ಯಾವುದೇ ಸಂದರ್ಭದಲ್ಲಿಯೂ ಸರ್ಕಾರಕ್ಕೆ ಮತ್ತು ಕಚೇರಿಗೆ ಮನವಿ ಸಲ್ಲಿಸಬಹುದಾಗಿದೆ. ಆದರೆ ಇಲಾಖಾ ಕಾರ್ಯದರ್ಶಿಗಳ ಅಧಿಕೃತ ಭೇಟಿಯ ಸಂದರ್ಭದಲ್ಲಿ, ತಾವು ಯಾವುದೇ ಮನವಿ/ ಅಹವಾಲನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಇಲಾಖೆಯ ಯಾವುದೇ ಅಧಿಕಾರಿಯವರಿಗಾಗಲೀ ಅಥವಾ ಕಾರ್ಯದರ್ಶಿಗಳಿಗಾಗಲೀ ದೂರವಾಣಿ, ಮಿಂಚಂಚೆ ಅಥವಾ ಪತ್ರ ಮೂಲಕ ಪ್ರಸ್ತಾವನೆ ಸಲ್ಲಿಸಿರುವುದಿಲ್ಲ. ಹಾಗೆಯೇ, ಮಾರ್ಗ ಮಧ್ಯೆ ತಡೆ ಒಡ್ಡಿದ ಸಂದರ್ಭದಲ್ಲಿಯೂ, ಯಾವುದೇ ಮನವಿ ಅಥವಾ ಅಹವಾಲನ್ನು ಸಲ್ಲಿಸುವ ಪ್ರಸ್ತಾಪವನ್ನು ಮಾಡಿರುವುದಿಲ್ಲ. ರೈತ ಸಂಘಟನೆಯವರು ಅನುವು ಮಾಡಿ ಕೊಡದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಮೂಲಕ ಕಾರ್ಯದರ್ಶಿಯವರು ಪ್ರಯಾಣ ಮುಂದುವರೆಸಿದ್ದರು.

ಬಳಿಕ ಎನ್‌ಎಂಡಿಸಿ ಲಿ. ನ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ: 2396 (ದೋಣಿಮಲೈ) ಗೆ ಸಂಬಂಧಿಸಿದ ಕಬ್ಬಿಣದ ಅದಿರು ಮಾದರಿ ಸಂಗ್ರಹಣೆ, ತಯಾರಿಕೆ ಮತ್ತು ವಿಶ್ಲೇಷಣಾ ಪ್ರಯೋಗಾಲಯಗಳು ಮತ್ತು ರಣಜೀತಪುರ ರೈಲ್ವೇ ಸೈಡಿಂಗ್ಸ್ ನಲ್ಲಿನ ಖನಿಜ ದಾಸ್ತಾನು ಪ್ರದೇಶ ಮತ್ತು ಮೆಕ್ಯಾನಿಕನಲ್ ರಿಕ್ಲೆಂಮರ್ ಲೋಡರ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಎಂಡಿಸಿ ಲಿ. ನ ಕಬ್ಬಿಣದ ಅದಿರು ಗಣಿ ಗುತ್ತಿಗೆ ಸಂಖ್ಯೆ:1111 ಮತ್ತು 2396 ಗಳಿಗೆ ಸಂಬAಧಿತ ವಿಷಯಗಳ ಕುರಿತಂತೆ ಎನ್‌ಎಂಡಿಸಿ ಲಿ., ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular