ಇಂದು ( ಆಗಸ್ಟ್ 26 ) ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರ ಸರಣಿಯ ಬೃಹತ್ ಯಶಸ್ಸಿನ ಬಳಿಕ ತೆರೆಗೆ ಬಂದಿರುವ ಟಾಕ್ಸಿಕ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡಿದ್ದು, ಚಿತ್ರದ ಅಡ್ವಾನ್ಸ್ ಬುಕಿಂಗ್ ದೊಡ್ಡ ಮಟ್ಟದಲ್ಲೇ ಜರುಗಿದೆ.
ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ 85 ಕೋಟಿ ಗಳಿಕೆ ಮಾಡಿರುವ ಟಾಕ್ಸಿಕ್ ಅಬ್ಬರದ ಮೊದಲ ದಿನದ ಗಳಿಕೆ ಮಾಡುವುದು ಪಕ್ಕಾ ಆಗಿದ್ದು, ಬೆಳಗ್ಗೆ ಆರು ಗಂಟೆಯಿಂದಲೇ ಭಾರತದಲ್ಲಿ ಪ್ರದರ್ಶನಗಳು ಆರಂಭಗೊಂಡಿವೆ.
ವಿದೇಶದಲ್ಲಿ ಈಗಾಗಲೇ ಪ್ರದರ್ಶನಗಳು ಮುಗಿದಿದ್ದು, ಅಲ್ಲಿನ ವಿಮರ್ಶೆಗಾಗಿ ಇಲ್ಲಿನ ಸಿನಿ ರಸಿಕರು ಹಾಗೂ ಪ್ರೇಕ್ಷಕರು ಕಾತರರಾಗಿ ಕಾಯುತ್ತಿದ್ದರು. ಆದರೆ ಬೆಳಗ್ಗೆ ಎದ್ದು ಈ ವಿಮರ್ಶೆಗಳನ್ನು ನೋಡಿದ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ನಿರಾಸೆ ಕಾದಿತ್ತು. ಏಕೆಂದರೆ ಅನೇಕ ತೆಲುಗು ಪೇಜ್‌ಗಳು ವಿದೇಶಿ ವಿಮರ್ಶೆ ಹೆಸರಿನಲ್ಲಿ ಚಿತ್ರಕ್ಕೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂಗಳನ್ನು ಪ್ರಕಟಿಸಿದ್ದವು.
ತೆಲುಗು ಡೈಲಿ, ವೆಂಕಿ ರಿವ್ಯೂಸ್, ಎಂ9 ನ್ಯೂಸ್, ಥೈವ್ಯೂ ಸೇರಿದಂತೆ ಅನೇಕ ತೆಲುಗು ಪುಟಗಳು ಟಾಕ್ಸಿಕ್ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಬರೆದುಕೊಂಡಿವೆ. ಚಿತ್ರದಲ್ಲಿ ಕಥೆಯೇ ಇಲ್ಲ, ಅರ್ಥಿವಿಲ್ಲದ ದೃಶ್ಯಗಳು, ಕಿಕ್ ನೋಡದ ಆಕ್ಷನ್ ದೃಶ್ಯಗಳಿವೆ ಹಾಗೂ ಚಿತ್ರ ಟಾರ್ಚರ್ ಎನಿಸುತ್ತದೆ ಎಂದು ಬರೆದುಕೊಂಡಿದ್ದವು.
ಹೀಗೆ ತೆಲುಗು ಪೇಜ್‌ಗಳಿಂದ ಮಾತ್ರ ದೊಡ್ಡ ಮಟ್ಟದಲ್ಲಿ ಕೆಟ್ಟ ವಿಮರ್ಶೆ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಟಾಕ್ಸಿಕ್ ತೆಲುಗಿನ ಇರುಮುಡಿ ಚಿತ್ರದ ಶೋಗಳನ್ನು ಕಸಿದುಕೊಂಡ ಕಾರಣ ಈ ರೀತಿ ಬೇಕಂತಲೇ ನೆಗೆಟಿವ್ ರಿವ್ಯೂಗಳನ್ನು ಹರಿಬಿಡಲಾಗುತ್ತಿದೆ ಎಂಬ ಆರೋಪಗಳೂ ಸಹ ಕೇಳಿಬಂದವು.
ಹೀಗೆ ತೆಲುಗು ಪೇಜ್‌ಗಳಿಂದ ದೊಡ್ಡ ಮಟ್ಟದಲ್ಲಿ ಕೆಟ್ಟ ವಿಮರ್ಶೆಗಳು ಹರಿದುಬಂದ ಬೆನ್ನಲ್ಲೇ ಸಿನಿ ಹಬ್ ಎಂಬ ಹಿಂದಿ ಸಿನಿಮಾ ಪೇಜ್ ಒಂದು ಈ ಕುರಿತು ಟ್ವೀಟ್ ಮಾಡಿದ್ದು, ಟಾಕ್ಸಿಕ್ ಬಗ್ಗೆ ತೆಲುಗು ಮಾಧ್ಯಮಗಳು ನಕಲಿ ವಿಮರ್ಶೆಗಳನ್ನು ಪ್ರಕಟಿಸುತ್ತಿವೆ ಎಚ್ಚರದಿಂದಿರಿ ಎಂದು ಬರೆದುಕೊಳ್ಳುವ ಮೂಲಕ ಅಂತಹ ಪೇಜ್‌ಗಳನ್ನು ಬೆತ್ತಲು ಮಾಡಿದೆ.
ಬೆಳಗ್ಗೆ ಏಳು ಗಂಟೆಗೆ ಚಿತ್ರದ ಸಂಪೂರ್ಣ ವಿಮರ್ಶೆಗಳನ್ನು ಈ ಪೇಜ್‌ಗಳು ಪ್ರಕಟಿಸಿದ್ದು, ಅಷ್ಟು ಬೇಗನೆ ಭಾರತದಲ್ಲಿ ಪ್ರದರ್ಶನ ಮುಗಿದಿಯೇ ಇರಲಿಲ್ಲ. ಇನ್ನು ವಿದೇಶದಿಂದ ವಿಮರ್ಶೆಗಳನ್ನು ಪ್ರಕಟಿಸಿರಬಹುದು ಎಂಬ ವಾದ ಕೇಳಿಬಂದರೂ ಇಷ್ಟು ದಿನಗಳ ಕಾಲ ಭಾರತದಲ್ಲಿ ಚಿತ್ರ ವೀಕ್ಷಿಸಿ ವಿಮರ್ಶೆ ಹಾಕುತ್ತಿದ್ದ ಈ ಪೇಜ್‌ಗಳು ಈ ಒಂದು ಚಿತ್ರಕ್ಕಾಗಿ ವಿದೇಶದಕ್ಕೆ ಹಾರಿದ್ವಾ ಎಂಬ ಅನುಮಾನ ಮೂಡದೇ ಇರದು.

