ಬೆಂಗಳೂರು: ಕಂದಾಯ ಇಲಾಖೆಯ 43 ಸೇವೆಗಳ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳಲು ಇ-ಕೆವೈಸಿ ಮತ್ತು ಫೇಸ್ ರೆಕಗ್ನಿಷನ್ ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೆ ಸಾಲಿನ ಬಜೆಟ್ ಮಂಡಿಸಿದ ಸಿಎಂ, ‘ಕುಟುಂಬ’, ‘ಫ್ರೂಟ್ಸ್’ ಮತ್ತು ‘ಭೂಮಿ’ ದತ್ತಾಂಶಗಳನ್ನು ಸಂಯೋಜಿಸಿ, ನಿರ್ಣಯ ನೆರವು ವ್ಯವಸ್ಥೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು, ಇ-ಆಸ್ತಿಯಲ್ಲಿರುವ ಜಮೀನು/ಆಸ್ತಿಯ ದತ್ತಾಂಶಗಳನ್ನು ಜಿಐಎಸ್-ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಕ್ರೋಢೀಕರಿಸಿ ಏಕರೂಪದಲ್ಲಿ ದಾಖಲೆಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಭೂಮಿ ತಂತ್ರಾಂಶವನ್ನು ಪ್ರಸ್ತುತ ತಂತ್ರಜ್ಞಾನಕ್ಕೆ ತಕ್ಕಂತೆ ಸಮಗ್ರವಾಗಿ ಆಧುನೀಕರಿಸುವುದರ ಮೂಲಕ 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದಿರುವ ‘ಭೂಮಿ-8.0’ ಸಾಫ್ಟ್ ವೇರ್ ಅನ್ನು ಸುಮಾರು 50 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಭೂ ವ್ಯಾಜ್ಯಗಳ ಇತ್ಯರ್ಥದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲು ‘ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ’ ಮತ್ತು ‘ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ಗಳ ಕಲಾಪಗಳನ್ನು ಸಿಸಿಎಂಎಸ್ ಮತ್ತು ಆರ್‍ಸಿಸಿಎಂಎಸ್ ತಂತ್ರಾಂಶಗಳನ್ನು ಸಂಯೋಜಿಸಿ, ಇದರೊಂದಿಗೆ ಎಲ್ಲ ಕಂದಾಯ ನ್ಯಾಯಾಲಯಗಳ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮತ್ತು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದರು.

