ಚಂಡೀಗಢ: ಪಂಜಾಬ್ ನ ಮೊಹಾಲಿಯಲ್ಲಿ ಕಬಡ್ಡಿ ಪಂದ್ಯದ ವೇಳೆ ಗುಂಡಿನ ದಾಳಿ ನಡೆದು ಆಟಗಾರ ಮೃತಪಟ್ಟಿದ್ದಾರೆ. ಮೊಹಾಲಿಯಲ್ಲಿ ಡಿಸೆಂಬರ್ 15ರಂದು ಕಬಡ್ಡಿ ಪಂದ್ಯದ ವೇಳೆ ದುಷ್ಕರ್ಮಿಗಳು ‘ರಾಣಾ ಬಾಲಚೌರಿಯಾ'(ಕನ್ವರ್ ದಿಗ್ವಿಜಯ್ ಸಿಂಗ್) ಎಂಬ ಆಟಗಾರನಿಗೆ ಗುಂಡಿಕ್ಕಿ ಕೊಂದಿದ್ದಾರೆ.
ಆಟಗಾರ ರಾಣಾ ಬಾಲಚೌರಿಯಾ (ಕನ್ವರ್ ದಿಗ್ವಿಜಯ್ ಸಿಂಗ್) 30 ವರ್ಷ ವಯಸ್ಸಿನವರಾಗಿದ್ದು, ಮೊಹಾಲಿಯ ಸೆಕ್ಟರ್ 82ರ ಕಬಡ್ಡಿ ಪಂದ್ಯಾವಳಿಯಲ್ಲಿ ಪಂದ್ಯ ಆರಂಭವಾಗುವ ಮೊದಲು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆಟಗಾರ ಮೃತಪಟ್ಟಿದ್ದಾರೆ.
ಮೋಟಾರ್ ಸೈಕಲ್‌ನಲ್ಲಿ ಬಂದ ದಾಳಿಕೋರ ಬಾಲಚೌರಿಯಾ ಅವರನ್ನು ಗುರಿಯಾಗಿಸಿಕೊಂಡು ಹಲವಾರು ಗುಂಡು ಹಾರಿಸಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಕಬಡ್ಡಿ ಆಟಗಾರ ಕನ್ವರ್ ದಿಗ್ವಿಜಯ್ ಸಿಂಗ್ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಯಿತು. ತಕ್ಷಣದ ವೈದ್ಯಕೀಯ ಸ್ಪಂದನೆ ಹೊರತಾಗಿಯೂ, ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಬೈಕ್‌ನಲ್ಲಿ ಬಂದ ದಾಳಿಕೋರರು ರಾಣಾ ಬಾಲಚೌರಿಯಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾದ ರಾಣಾ ಬಾಲಚೌರಿಯಾ ಅವರನ್ನು ಪಂದ್ಯಾವಳಿಯ ಸಮಯದಲ್ಲಿ ನೂರಾರು ಪ್ರೇಕ್ಷಕರ ಸಮ್ಮುಖದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು, ಇದು ಸ್ಥಳದಲ್ಲಿ ಭೀತಿಯನ್ನು ಉಂಟುಮಾಡಿತು ಎಂದು ಡಿಎಸ್ಪಿ ಹರ್ಸಿಮ್ರಾನ್ ಸಿಂಗ್ ಬಾಲ್ ಘಟನೆಯನ್ನು ದೃಢಪಡಿಸಿದ್ದಾರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅಪರಾಧಿಯನ್ನು ಹಿಡಿಯುತ್ತೇವೆ ಎಂದು ಹೇಳಿದ್ದಾರೆ.
ಈ ದಾಳಿಯು ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಪ್ರತೀಕಾರವಾಗಿದೆ. ಲಾರೆನ್ಸ್ ಬಿಷ್ಣೋಯ್ ಅವರ ಪ್ರತಿಸ್ಪರ್ಧಿ ಗ್ಯಾಂಗ್ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹಂತಕರಿಗೆ ಆಶ್ರಯ ನೀಡಿದ್ದರಿಂದ ರಾಣಾ ಬಾಲಚೌರಿಯಾ ಅವರ ಮೇಲೆ ದಾಳಿ ನಡೆಸಲಾಗಿದೆ. ಬಾಂಬಿಹಾ ಗ್ಯಾಂಗ್ ಹತ್ಯೆ ಹೊಣೆ ಹೊತ್ತುಕೊಂಡಿದೆ, ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಆಟಗಾರ ಭಾಗಿಯಾಗಿದ್ದ ಎನ್ನಲಾಗಿದೆ.

