ನೋಯ್ಡಾ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಕಾರ್ ಗೆ ಹೊತ್ತಿಕೊಂಡು 46 ವರ್ಷದ ಉದ್ಯಮಿಯೊಬ್ಬರು ಸುಟ್ಟು ಕರಕಲಾದ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತರನ್ನು ಬಣ್ಣ ವ್ಯವಹಾರದಲ್ಲಿ ತೊಡಗಿದ್ದ ರಾಜ್ ಕುಮಾರ್ ಸಿಂಘಾಲ್ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೋರ್ಖಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.
ಸಿಂಘಾಲ್ ಪಾರ್ಥಲಾ ಚೌಕ್ ಕಡೆಗೆ ಚಾಲನೆ ಮಾಡುತ್ತಿದ್ದಾಗ ಅವರ ವಾಹನಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸಿಂಘಾಲ್ ಕಾರ್ ನಿಂದ ಹೊರಬರಲು ಸಾಧ್ಯವಾಗದೆ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಕೃಷ್ಣ ಗೋಪಾಲ್ ಶರ್ಮಾ ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರ್ ಟ್ಟುಹೋಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ಕಾರ್ ನಲ್ಲಿ ಬಣ್ಣ ಅಥವಾ ಇತರ ಸುಡುವ ವಸ್ತುಗಳು ಇರುವುದು ಬೆಂಕಿ ವೇಗವಾಗಿ ಹರಡಲು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

