ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಾಲ್ಕು ದಿನಗಳ ಕಾಲ ವಿಚಾರಣೆ ನಡೆದಿದ್ದು, ಸುಮಾರು 12 ಗಂಟೆಗಳ ಕಾಲ ಹೇಳಿಕೆ ದಾಖಲಿಸಲಾಗಿದೆ. ಒಟ್ಟು 114 ಪುಟಗಳ ಹೇಳಿಕೆ ದಾಖಲಾಗಿದೆ.
ಅಕ್ಟೋಬರ್ 5ರಂದು ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೀಗ ಕೋರ್ಟ್‌ನಲ್ಲಿ ಡಾಕ್ಯುಮೆಂಟ್ ಮಾರ್ಕಿಂಗ್ ಆರಂಭವಾಗಲಿದೆ. 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಏನಿದು ಡಾಕ್ಯುಮೆಂಟ್ ಮಾರ್ಕಿಂಗ್?
ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪ್ರದೋಷ್ ಅವರಿಗೆ ತೋರಿಸಲಾಗುತ್ತದೆ. ಎಸ್‌ಪಿಪಿ ಸಂಬಂಧಪಟ್ಟ ದಾಖಲೆಗಳ ಮೂಲ ಪ್ರತಿ ಅಥವಾ ಫೋಟೋಗಳನ್ನು ಕೋರ್ಟ್‌ನಲ್ಲಿ ಹಾಜರುಪಡಿಸಲಿದ್ದಾರೆ.
ದಾಖಲೆಗಳನ್ನು ಪ್ರದೋಷ್ ಗುರುತಿಸಿ, ಅವುಗಳ ಬಗ್ಗೆ ದೃಢಪಡಿಸಿದರೆ ಅವುಗಳನ್ನು Exhibit ಎಂದು ಮಾರ್ಕ್ ಮಾಡಲಾಗುತ್ತದೆ. ಬಳಿಕ Exhibit-1, Exhibit-2, Exhibit-3 ಎಂದು ಕ್ರಮವಾಗಿ ಗುರುತು ನೀಡಲಾಗುತ್ತದೆ.
ಅದೇ ರೀತಿ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳನ್ನು ಪ್ರದೋಷ್ ಗುರುತಿಸಿದರೆ ಅವುಗಳಿಗೆ M1, M2, M3 ಎಂದು ಗುರುತು ನೀಡಲಾಗುತ್ತದೆ.
ಮೊದಲಿಗೆ ದಾಖಲೆಗಳ ಮಾರ್ಕಿಂಗ್ ನಡೆಯಲಿದ್ದು, ನಂತರ ವಶಪಡಿಸಿಕೊಂಡಿರುವ ವಸ್ತುಗಳ ಮಾರ್ಕಿಂಗ್ ನಡೆಯಲಿದೆ.
ಸಿಸಿಟಿವಿ, ಡಿಜಿಟಲ್ ಸಾಕ್ಷ್ಯಗಳೂ ಕೋರ್ಟ್‌ಗೆ
ಡಾಕ್ಯುಮೆಂಟ್ ಮಾರ್ಕಿಂಗ್ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಸಾಕ್ಷ್ಯಗಳು ಹಾಗೂ ವಾಹನಗಳ ಫೋಟೋಗಳನ್ನು ಪ್ರದೋಷ್ ಅವರಿಗೆ ತೋರಿಸಲಾಗುತ್ತದೆ.
ಇದರ ನಂತರ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ಲಾಠಿ, ಮರದ ತುಂಡು, ಮೊಬೈಲ್, ನೈಲಾನ್ ಹಗ್ಗ ಹಾಗೂ ಎಲೆಕ್ಟ್ರಿಕ್ ಶಾಕ್ ನೀಡಲು ಬಳಸಿದ್ದ ಸಾಧನ ಸೇರಿದಂತೆ ವಿವಿಧ ವಸ್ತುಗಳನ್ನು ತೋರಿಸಲಾಗುತ್ತದೆ.
ಇದರ ಜೊತೆಗೆ ಆರೋಪಿಗಳು ಘಟನೆಯ ವೇಳೆ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿಗಳನ್ನೂ ಗುರುತಿಸಲು ನೀಡಲಾಗುತ್ತದೆ. ಪ್ರದೋಷ್ ಅವುಗಳನ್ನು ಗುರುತಿಸಿದ ಬಳಿಕ ಕೋರ್ಟ್‌ನಲ್ಲಿ ಸಾಕ್ಷ್ಯವಾಗಿ ಮಾರ್ಕ್ ಮಾಡಲಾಗುತ್ತದೆ.
ಮುಂದಿನ ಹಂತದಲ್ಲಿ ನಡೆಯುವ ಕ್ರಾಸ್ ಎಕ್ಸಾಮಿನೇಷನ್ ವೇಳೆ ಈ ದಾಖಲೆಗಳು ಹಾಗೂ ವಸ್ತುಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ಮುಗಿದ ಬೆನ್ನಲ್ಲೇ ಇದೀಗ ಡಾಕ್ಯುಮೆಂಟ್ ಮಾರ್ಕಿಂಗ್ ಪ್ರಕ್ರಿಯೆ ಆರಂಭವಾಗುತ್ತಿರುವುದು ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಪ್ರಮುಖ ಹಂತವಾಗಿದೆ.

