ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ-2026’ಯನ್ನು ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದ ನಡುವೆಯೇ ಯಾವುದೇ ಸುದೀರ್ಘ ಚರ್ಚೆಯಿಲ್ಲದೆ ಲೋಕಸಭೆ ಅಂಗೀಕರಿಸಿದೆ.
ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನನ-ಮರಣ ಪ್ರಮಾಣಪತ್ರಗಳ ವಿತರಣಾ ಪ್ರಕ್ರಿಯೆಯನ್ನು ಸರಳ ಮತ್ತು ಆಧುನಿಕಗೊಳಿಸುವ ಉದ್ದೇಶದಿಂದ ಈ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಸದನದಲ್ಲಿ ಪ್ರತಿಪಕ್ಷ ಸದಸ್ಯರ ನಿರಂತರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಮಸೂದೆಗೆ ಕೆಳಸದನದ ಅನುಮೋದನೆ ದೊರೆತಿದೆ.
ಈ ಹೊಸ ತಿದ್ದುಪಡಿ ಮಸೂದೆಯ ಮೂಲಕ ಜನನ ಮತ್ತು ಮರಣಗಳ ಡಿಜಿಟಲ್ ನೋಂದಣಿ ಕಡ್ಡಾಯವಾಗಲಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಡೇಟಾಬೇಸ್‌ಗಳನ್ನು ಪರಸ್ಪರ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ, ಆಧಾರ್, ಮತದಾರರ ಪಟ್ಟಿ, ಪಾಸ್‌ಪೋರ್ಟ್, ಪಡಿತರ ಚೀಟಿ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳೊಂದಿಗೆ ಈ ಮಾಹಿತಿಯನ್ನು ಸಂಪರ್ಕಿಸಲು ಇದು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದಿರುವ ಈ ಮಸೂದೆ ಇದೀಗ ಅಂತಿಮವಾಗಿ ಕಾನೂನಾಗಲು ರಾಜ್ಯಸಭೆಯ ಅನುಮೋದನೆಗೆ ಕಳುಹಿಸಲಾಗುತ್ತದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಹತ್ವದ ಮಸೂದೆ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಈ “ಪ್ರಮುಖ ಮಸೂದೆ” ಕುರಿತು ಸಮಗ್ರ ಚರ್ಚೆ ಬಯಸಿತ್ತು ಎಂದು ಅವರು ಹೇಳಿದರು.
“ಇದು ಅತ್ಯಂತ ದುರದೃಷ್ಟಕರ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಿ. ನಿಮ್ಮನ್ನು ಸಂಸತ್ತಿಗೆ ಕಳುಹಿಸಿದ ಜನರು ನಿಮ್ಮಿಂದ ಉತ್ತರವನ್ನು ಕೇಳುತ್ತಾರೆ,” ಎಂದು ರಿಜಿಜು ಹೇಳಿದರು.
ಮಸೂದೆ ಯಾವುದೇ ಸಹಕಾರವಿಲ್ಲದೆ ಅಂಗೀಕಾರವಾಗಿರುವುದು “ದುರದೃಷ್ಟಕರ” ಎಂದು ಸೈಕಿಯಾ ಕೂಡ ಅಭಿಪ್ರಾಯಪಟ್ಟರು. ಇದೇ ವೇಳೆ, ಸಂವಿಧಾನ (130ನೇ ತಿದ್ದುಪಡಿ) ಮಸೂದೆ–2025 ಅನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ (JPC) ಅಧ್ಯಕ್ಷೆಯಾಗಿರುವ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರಿಗೆ, ಸಮಿತಿಯ ವರದಿಯನ್ನು ಮಂಡಿಸಲು ಚಳಿಗಾಲದ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ಅವಧಿ ವಿಸ್ತರಣೆ ನೀಡಲಾಯಿತು.

