ಬೆಂಗಳೂರು: ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿ ಅಭಿವೃದ್ಧಿಪಡಿಸದೆ ಇದ್ದರೆ ಅಂತಹ ಭೂಮಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಕೃಷಿಯೇತರ ಆಸ್ತಿ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಿಧಿಸಲಾಗುವುದು.
ಕೃಷಿ ಜಮೀನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಆದಾಗ ಅಂತಹ ಪಹಣಿಯನ್ನು ರದ್ದು ಪಡಿಸಲಾಗುವುದು. ಇಲ್ಲವಾದಲ್ಲಿ ಭೂಮಿ ತಂತ್ರಾಂಶದಲ್ಲಿ ಕೃಷಿಯೇತರ ಜಮೀನು ಎಂದು ಫ್ಲಾಗ್ ಮಾಡುವ ಮೂಲಕ ಅಕ್ರಮ ನೋಂದಣಿ ತಡೆಯಲಾಗುತ್ತಿತ್ತು. ಆದರೆ ಭೂ ಪರಿವರ್ತನೆ ಆದ ಬಳಿಕ ಇ-ಖಾತಾ ಪಡೆಯದಿದ್ದರೆ ಅಂತವರಿಗೆ ನೋಂದಣಿಗೆ ಅವಕಾಶ ಇರಲಿಲ್ಲ. ಈ ಸಮಸ್ಯೆ ಬಗೆಹರಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುವುದು. ಕೃಷಿಯೇತರ ನೋಂದಣಿ ರಾಜಸ್ವ ಸಂಗ್ರಹಿಸಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೃಷಿ ಜಮೀನಿನ ಪಹಣಿಗಳನ್ನು ಭೂಮಿ ತಂತ್ರಾಂಶದ ಮೂಲಕ ನಿರ್ವಹಿಸಲಾಗುವುದು. ಕೃಷಿ ಉದ್ದೇಶದಿಂದ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ಆದ ಬಳಿಕವೂ ಪಹಣಿ ಉಳಿಯುತ್ತಿತ್ತು. ಮತ್ತೊಂದು ಕಡೆ ಇ-ಖಾತಾ ಸೃಜನೆಯಾಗುತ್ತಿತ್ತು. ಇದರ ಪರಿಣಾಮ ಸರ್ವೇ ನಂಬರ್ ಮತ್ತು ಇ-ಖಾತಾ ಸಂಖ್ಯೆ ಬಳಸಿಕೊಂಡು ಅಕ್ರಮವಾಗಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರು. ಇದರಿಂದ ಕಾನೂನುಬಾಹಿರ ಭೂ ವ್ಯವಹಾರ ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಒಮ್ಮೆ ಕೃಷಿಯೇತರ ಎಂದು ಪರಿವರ್ತನೆ ಆದರೆ ನೋಂದಣಿ ತಂತ್ರಾಂಶದಲ್ಲಿ ಭೂ ಪರಿವರ್ತನೆ ಫ್ಲಾಗ್ ಮಾಡಲಾಗುತ್ತಿತ್ತು.
ಭೂ ಪರಿವರ್ತಿತ ಜಮೀನುಗಳ ಪಹಣಿಗಳಿಗೆ ಭೂಕಂದಾಯ ಕಡಿತಗೊಳಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ಆಸ್ತಿ ಇ-ಖಾತಾ ನೀಡಬೇಕಿದೆ. ಆದರೆ ಭೂ ಪರಿವರ್ತನೆ ನಂತರ ಇ-ಖಾತಾ ನೀಡಲು ಕಾಲಾವಕಾಶ ಬೇಕು.
ಇನ್ನು ಮುಂದೆ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿ ಅಭಿವೃದ್ಧಿಯಾಗದೇ ಇರುವ ಜಮೀನುಗಳ ಪಹಣಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಮಾಹಿತಿ ಲಭ್ಯವಾಗುವಂತೆ ಭೂಮಿ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡು ಮಾಡಲಾಗಿದೆ ಎಂದು ಹೇಳಲಾಗಿದೆ.

