ಹಿಂದಿ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿರುವ ನಟ ರಾಜ್‌ಕುಮಾರ್ ರಾವ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸ್ವಂತ ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಪ್ರತಿಭಾವಂತ ನಟನ ಯಶಸ್ಸಿನ ಹಿಂದಿನ ದಾರಿ ಸುಲಭದ್ದಾಗಿರಲಿಲ್ಲ. ಅಷ್ಟಕ್ಕೂ ಅವರು ಬಾಲಿವುಡ್ ಅಂಗಳದಲ್ಲಿ ನೆಲೆ ಕಂಡುಕೊಳ್ಳಲು ಪಟ್ಟ ಶ್ರಮ ಮತ್ತು ಎದುರಿಸಿದ ಕಷ್ಟಗಳ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.
ಗುರುಗ್ರಾಮದ ಮೂಲದವರಾದ ರಾಜ್‌ಕುಮಾರ್ ರಾವ್ ಅವರಿಗೆ ಸಣ್ಣ ವಯಸ್ಸಿನಿಂದಲೇ ಅಭಿನಯದತ್ತ ತೀವ್ರ ಆಸಕ್ತಿಯಿತ್ತು. ಮಗನ ಆಸೆಯನ್ನು ಅರಿತ ಅವರ ತಾಯಿ ರಂಗಭೂಮಿ ಸೇರಲು ಪ್ರೋತ್ಸಾಹ ನೀಡಿದ್ದರು. ದೆಹಲಿಯ ಶ್ರೀರಾಮ್ ಸೆಂಟರ್‌ನಲ್ಲಿ ನಟನಾ ತರಗತಿಗೆ ಸೇರಿಕೊಂಡಿದ್ದ ರಾಜ್‌ಕುಮಾರ್, ಪ್ರತಿದಿನ ಗುರುಗ್ರಾಮದಿಂದ ದೆಹಲಿಗೆ ಸುಮಾರು 140 ಕಿಲೋಮೀಟರ್ ಸೈಕಲ್ ಚಾಲನೆ ಮಾಡುತ್ತಿದ್ದರು. ಆ ದೀರ್ಘ ಪ್ರಯಾಣದ ಸಮಯದಲ್ಲಿ ವಾಕ್‌ಮನ್‌ನಲ್ಲಿ ಸ್ಪೂರ್ತಿದಾಯಕ ಹಾಡುಗಳನ್ನು ಕೇಳುತ್ತಾ ತಮ್ಮ ಕನಸನ್ನು ಬೆನ್ನತ್ತಿದ್ದರು.
ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳು ಅವರನ್ನು ತೀವ್ರವಾಗಿ ಕಾಡಿದವು. ಮೊದಲ ಸಿನಿಮಾಗೆ ಅವರಿಗೆ ಸಿಕ್ಕಿದ ಸಂಭಾವನೆ ಕೇವಲ 11,000 ರೂಪಾಯಿ ಮಾತ್ರ. ಮುಂಬೈನಂತಹ ದುಬಾರಿ ನಗರದಲ್ಲಿದ್ದಾಗ ಬ್ಯಾಂಕ್ ಖಾತೆಯಲ್ಲಿ ಕೇವಲ 18 ರೂಪಾಯಿ ಉಳಿದಿದ್ದ ದಿನಗಳನ್ನೂ ಅವರು ಕಂಡಿದ್ದಾರೆ. ಆ ಸಮಯದಲ್ಲಿ ಬಿಸ್ಕತ್ ಮತ್ತು ಫ್ರೂಟಿ ಕುಡಿದು ಮಧ್ಯಾಹ್ನದ ಊಟವನ್ನು ಸರಿದೂಗಿಸುತ್ತಿದ್ದರು. ಹಣವಿಲ್ಲದಿದ್ದಾಗ ತಮ್ಮ ಫಿಲ್ಮ್ ತರಬೇತಿ ಸಂಸ್ಥೆಯ ಗೆಳೆಯರ ಮನೆಗೆ ತೆರಳಿ ರಾತ್ರಿ ಊಟ ಮಾಡುತ್ತಿದ್ದುದಾಗಿ ಅವರು ನೆನಪಿಸಿಕೊಳ್ಳುತ್ತಾರೆ. ಇಂತಹ ಕಷ್ಟದ ಸಂದರ್ಭದಲ್ಲೂ ಹಣಕ್ಕಾಗಿ ಸಿಕ್ಕಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೆ, ಉತ್ತಮ ಕಥೆಗಳನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದು ಅವರ ಶ್ರೇಷ್ಠತೆಗೆ ಸಾಕ್ಷಿ.
ಲವ್ ಸೆಕ್ಸ್ ಔರ್ ಧೋಖಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಇವರು, ನಂತರ ಗ್ಯಾಂಗ್ಸ್ ಆಫ್ ವಾಸೇಪುರ್ 2, ಕೈ ಪೋ ಚೆ, ಕ್ವೀನ್, ಆಲಿಗಢ್ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಶಾಹಿದ್ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಗೌರವ ಕೂಡ ಒಲಿದುಬಂತು. ಪ್ರಸ್ತುತ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ರಾಜ್‌ಕುಮಾರ್ ರಾವ್, ಮುಂದಿನ ದಿನಗಳಲ್ಲಿ ಖ್ಯಾತ ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಮ್ ಅವರ ಜೀವನಾಧಾರಿತ ಪ್ರಹಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

