HomeKarnatakaರೀಲ್ಸ್ ವೈರಲ್ ಆಗಬೇಕೆಂಬ ಹುಚ್ಚು: ಮೈಸೂರು ದಸರಾ ಆನೆ ತಾಲೀಮಿನ ಸುತ್ತ ಸಾವಿರಾರು ಮೊಬೈಲ್‌ಗಳು, ಜನಸಾಗರ

ರೀಲ್ಸ್ ವೈರಲ್ ಆಗಬೇಕೆಂಬ ಹುಚ್ಚು: ಮೈಸೂರು ದಸರಾ ಆನೆ ತಾಲೀಮಿನ ಸುತ್ತ ಸಾವಿರಾರು ಮೊಬೈಲ್‌ಗಳು, ಜನಸಾಗರ

ಮೈಸೂರು ದಸರಾ ಎಂದಾಕ್ಷಣ ನೆನಪಾಗುವುದು ಅಂಬಾರಿ ಹೊತ್ತ ಗಜಪಡೆ, ಜಂಬೂಸವಾರಿ, ಅರಮನೆಯ ವೈಭವ ಹಾಗೂ ನಾಡಿನ ಸಂಸ್ಕೃತಿಯ ಸೊಬಗು. ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ಇಂದು ಕೇವಲ ಮೈಸೂರು ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆಯುವ ದೊಡ್ಡ ಸಾಂಸ್ಕೃತಿಕ ಉತ್ಸವವಾಗಿ ಬೆಳೆದಿದೆ. ಆದರೆ ದಸರಾ ಆನೆಗಳ ತಾಲೀಮು ಹಾಗೂ ನಡಿಗೆ ನೋಡಲು ಸೇರುತ್ತಿರುವ ಭಾರೀ ಜನಸ್ತೋಮ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಒಂದು ಕಾಲದಲ್ಲಿ ದಸರಾ ಆನೆಗಳು ಮೈಸೂರು ಅರಮನೆ ಆವರಣದಿಂದ ರಾಜಮಾರ್ಗದಲ್ಲಿ ಸಾಗುತ್ತಿದ್ದಾಗ ಜನರು ರಸ್ತೆಯ ಬದಿಯಲ್ಲಿ ಶಾಂತವಾಗಿ ನಿಂತು ಅವುಗಳ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆಗ ಇಂದಿನಂತೆ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್‌ ಇರಲಿಲ್ಲ. ಆನೆಗಳ ನಡಿಗೆಯನ್ನು ನೋಡಿದ ಅನುಭವವೇ ಜನರಿಗೆ ಮುಖ್ಯವಾಗಿತ್ತು. ಇನ್ನು ಈ ಸಂಬಂಧ ಹಳೆಯ ವಿಡಿಯೊಗಳು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಇಲ್ಲದ ಆ ಕಾಲದಲ್ಲಿ ಈಗಿನ ಹಾಗೆ ಅಪಾರವಾದ ಜನಸಂದಣಿ ಸೇರುತ್ತಿರಲಿಲ್ಲ. ಆನೆಗಳು ತಮ್ಮ ಪಾಡಿಗೆ ತಾವು ಯಾವ ಸದ್ದು ಗದ್ದಲವಿಲ್ಲದೇ ಸರಾಗವಾಗಿ ಹೆಜ್ಜೆ ಹಾಕಿ ತಾಲೀಮು ನಡೆಸುತ್ತಿದ್ದವು.

ಆದರೆ ಈಗ ಕಾಲ ಬದಲಾಗಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ವ್ಯಾಪಕ ಬೆಳವಣಿಗೆಯಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮವೂ ಫೋಟೋ ಹಾಗೂ ವಿಡಿಯೋಗಳಿಲ್ಲದೆ ಪೂರ್ಣವಾಗದಂತಾಗಿದೆ. ಭಾರತದಲ್ಲಿ ವಿಶೇಷವಾಗಿ ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಮತ್ತು ಫೇಸ್‌ಬುಕ್ ವಿಡಿಯೋಗಳ ಬಳಕೆ ಹೆಚ್ಚಾದಂತೆ, ಕಣ್ಣಾರೆ ನೋಡುವುದಕ್ಕಿಂತ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಸರಾ ಆನೆಗಳು ರಸ್ತೆಯಲ್ಲಿ ಕಾಣಿಸಿಕೊಂಡ ತಕ್ಷಣವೇ ಹಲವರು ಮೊಬೈಲ್‌ಗಳನ್ನು ಎತ್ತಿ ವಿಡಿಯೋ ಚಿತ್ರೀಕರಣ ಆರಂಭಿಸುತ್ತಾರೆ. ಕೆಲವರು ಉತ್ತಮ ಆ್ಯಂಗಲ್‌ಗಾಗಿ ಆನೆಗಳ ಹತ್ತಿರ ಹೋಗಲು ಪ್ರಯತ್ನಿಸುತ್ತಾರೆ. ಮತ್ತಷ್ಟು ಮಂದಿ ಸೆಲ್ಫಿ ಹಾಗೂ ರೀಲ್ಸ್‌ಗಾಗಿ ಮುಗಿಬೀಳುತ್ತಾರೆ. ‘ವಿಡಿಯೋ ವೈರಲ್ ಆಗಬೇಕು’, ‘ಹೆಚ್ಚು ವೀಕ್ಷಣೆ ಬರಬೇಕು’ ಎಂಬ ಮನೋಭಾವವೂ ಈ ಜನದಟ್ಟಣೆಗೆ ಒಂದು ಕಾರಣ ಎನ್ನಲಾಗುತ್ತಿದೆ.

ದಸರಾ ಒಂದು ಐತಿಹಾಸಿಕ ಆಚರಣೆ

ಮೈಸೂರು ದಸರಾ ಮೂಲತಃ ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ. ಇದು ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ರಾಜವಂಶದ ವೈಭವವನ್ನು ಪ್ರತಿಬಿಂಬಿಸುವ ನಾಡಹಬ್ಬ. ದಸರಾ ಜಂಬೂಸವಾರಿ ಅದರ ಪ್ರಮುಖ ಆಕರ್ಷಣೆ. ಆನೆಗಳ ತರಬೇತಿ, ತಾಲೀಮು, ಅವುಗಳ ಅಲಂಕಾರ ಹಾಗೂ ಅಂಬಾರಿ ಹೊರುವ ಸಿದ್ಧತೆಗಳು ದಸರೆಯ ವಿಶೇಷ ಭಾಗಗಳಾಗಿವೆ.

ಎಚ್ಚರಿಕೆ ವಹಿಸುವುದು ಅಗತ್ಯ

ಹೀಗಾಗಿ ದಸರಾ ಆನೆಗಳನ್ನು ನೋಡುವ ಉತ್ಸಾಹ ಸಹಜವಾದರೂ, ಅವುಗಳ ಸುತ್ತ ಅನಗತ್ಯ ಗದ್ದಲ, ನೂಕುನುಗ್ಗಲು ಮತ್ತು ಮೊಬೈಲ್ ಚಿತ್ರೀಕರಣದಿಂದ ಅವುಗಳಿಗೆ ಒತ್ತಡ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಥವಾ ಫೋಟೋ ಪಡೆಯುವ ಆಸೆಗಿಂತ, ದಸರೆಯ ಪರಂಪರೆ ಮತ್ತು ಆನೆಗಳ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular