ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಕಿಂಗ್’ ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸಿನೆಮಾ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಸೆಟ್‌ನಿಂದ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಅವರ ಹೊಸ ಲುಕ್‌ನ ಫೋಟೋಗಳು ಸೋರಿಕೆಯಾಗಿವೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರ ಬೆನ್ನಲ್ಲೇ ಇದೀಗ ಹಿರಿಯ ನಟ ಅನಿಲ್ ಕಪೂರ್ ಅವರ ಅತ್ಯಂತ ವಿಭಿನ್ನ ಹಾಗೂ ಆಘಾತಕಾರಿ ಗೆಟಪ್‌ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಈ ಫೋಟೋದಲ್ಲಿ ನಟ ಅನಿಲ್ ಕಪೂರ್ ಸಂಪೂರ್ಣವಾಗಿ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದು, ಮೊದಲ ನೋಟಕ್ಕೆ ಯಾರೂ ಕೂಡ ಅವರನ್ನು ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ‘ಕ್ಲಿಪ್ ಟ್ವೀಟ್ಸ್’ ಎಂಬ ಖಾತೆಯಿಂದ ಈ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ‘ಕಿಂಗ್ ಚಿತ್ರದ ಶೂಟಿಂಗ್ ಸೆಟ್‌ನಿಂದ ಮತ್ತೊಂದು ಫೋಟೋ ಲೀಕ್ ಆಗಿದೆ, ಅನಿಲ್ ಕಪೂರ್ ಅವರ ಹೊಸ ಬೋಳು ತಲೆಯ ಲುಕ್ ನೋಡಿ’ ಎಂದು ಬರೆದುಕೊಳ್ಳಲಾಗಿದೆ. ಈ ಫೋಟೋ ಬಹಿರಂಗಗೊಳ್ಳುತ್ತಿದ್ದಂತೆ ಅನಿಲ್ ಕಪೂರ್ ಅಭಿಮಾನಿಗಳು ಮತ್ತು ಸಿನೆಮಾ ಪ್ರಿಯರು ಬೆರಗಾಗಿದ್ದಾರೆ.
ಆದರೆ, ಈ ಫೋಟೋದ ನೈಜತೆಯ ಕುರಿತು ನೆಟ್ಟಿಗರಲ್ಲಿ ತೀವ್ರ ಅನುಮಾನಗಳು ಮತ್ತು ಚರ್ಚೆಗಳು ಶುರುವಾಗಿವೆ. ಈ ಫೋಟೋ ನಿಜವಾಗಿಯೂ ಸಿನಿಮಾದ ಶೂಟಿಂಗ್ ಸೆಟ್‌ನಿಂದ ಲೀಕ್ ಆಗಿದೆಯೇ ಅಥವಾ ಇದನ್ನು ಎಐ ಅಂದರೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಎಡಿಟ್ ಮಾಡಿ ಸೃಷ್ಟಿಸಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಕಾಮೆಂಟ್ ವಿಭಾಗದಲ್ಲಿ ಹಲವು ನೆಟ್ಟಿಗರು ‘ಇದು ಸಂಪೂರ್ಣವಾಗಿ ಎಐ ಸೃಷ್ಟಿ, ಸರಿಯಾಗಿ ಎಡಿಟ್ ಮಾಡಿ’ ಎಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ದಿನ ಹೊರಬಿದ್ದಿದ್ದ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಅವರ ರಗಡ್ ಲುಕ್ ಫೋಟೋಗೂ ಇದೇ ರೀತಿಯ ಎಐ ಅನುಮಾನಗಳು ವ್ಯಕ್ತವಾಗಿದ್ದವು.
ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ‘ಕಿಂಗ್’ ಸಿನಿಮಾ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಸಿನಿಮಾದ ಮೂಲಕ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ಶಾರುಖ್ ಖಾನ್, ಸುಹಾನಾ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಮತ್ತು ಜ್ಯಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

