ಮೂರು ವರ್ಷಗಳ ಕಾಲ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದರೂ, ಮನೆ ಖಾಲಿ ಮಾಡಿದ ಬಳಿಕ ಭದ್ರತಾ ಠೇವಣಿ (Security Deposit) ಹಣವನ್ನು ಮರಳಿ ಪಡೆಯಲು ಮಾಲೀಕರ ಬಳಿ ಪದೇಪದೆ ಮನವಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೆಂಗಳೂರಿನ ಬಾಡಿಗೆದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಹೌದು. ಮನೆ ಬಾಡಿಗೆಗೆ ಪಡೆಯುವಾಗ ಭದ್ರತಾ ಠೇವಣಿ ನೀಡುವುದು ಸಾಮಾನ್ಯ. ಆದರೆ ಮನೆ ಖಾಲಿ ಮಾಡಿದ ಬಳಿಕ ಅದೇ ಹಣವನ್ನು ಮರಳಿ ಪಡೆಯಲು ಮನೆ ಮಾಲೀಕರ ಹಿಂದೆ ಅಲೆಯಬೇಕಾದರೆ ಹೇಗಿರುತ್ತದೆ? ಬೆಂಗಳೂರಿನ ಬಾಡಿಗೆದಾರರೊಬ್ಬರು ಮೂರು ವರ್ಷಗಳ ಕಾಲ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದರೂ, ಮನೆ ಖಾಲಿ ಮಾಡಿದ ನಂತರ ಠೇವಣಿ ಹಣಕ್ಕಾಗಿ ಪದೇಪದೆ ಮನವಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಮನೆ ಖಾಲಿ ಮಾಡಿದ ನಂತರ ಭದ್ರತಾ ಠೇವಣಿ ಹಣವನ್ನು ಮರಳಿ ಪಡೆಯುವುದು ಬಾಡಿಗೆದಾರರಿಗೆ ಕೆಲವೊಮ್ಮೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಮಾಲೀಕರು ಹಣ ಹಿಂದಿರುಗಿಸಲು ನಿರಂತರವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ತಮ್ಮ ಅನುಭವವನ್ನು ಅವರು ‘ಅವಮಾನಕರ ಪ್ರಕ್ರಿಯೆ’ ಎಂದು ಬಣ್ಣಿಸಿದ್ದು, ತಮಗೆ ಸೇರಬೇಕಾದ ಹಣಕ್ಕಾಗಿ ಪದೇಪದೆ ಬೇಡಿಕೊಳ್ಳಬೇಕಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಬಾಡಿಗೆ ಮನೆ ವಿವಾದಗಳು ಹಾಗೂ ಠೇವಣಿ ಹಣ ಮರಳಿ ಪಡೆಯಲು ಬಾಡಿಗೆದಾರರು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆಗೆ ಕಾರಣವಾಗಿದೆ.
ಮೂರು ವರ್ಷ ಸರಿಯಾಗಿ ಬಾಡಿಗೆ ಪಾವತಿಸಿದರೂ ಠೇವಣಿ ಹಣ ವಾಪಸ್ ಸಿಗಲಿಲ್ಲ!
ರೆಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು, ಕಳೆದ ಮೂರು ವರ್ಷಗಳಿಂದ ತಾವು ಜವಾಬ್ದಾರಿಯುತ ಬಾಡಿಗೆದಾರರಾಗಿದ್ದು, ಪ್ರತಿ ತಿಂಗಳೂ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಆದರೆ ಮನೆ ಖಾಲಿ ಮಾಡಿದ ಬಳಿಕ ಭದ್ರತಾ ಠೇವಣಿ ಹಣವನ್ನು ಮರಳಿ ನೀಡುವಂತೆ ಕೇಳಿದಾಗ, ಮಾಲೀಕರು ತಮ್ಮ ಸಂದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಅಥವಾ ಒಂದಲ್ಲೊಂದು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಕಳೆದ ಮೂರು ವರ್ಷಗಳಿಂದ ನಾನು ಉತ್ತಮ ಹಾಗೂ ನಿಯಮಗಳನ್ನು ಪಾಲಿಸುವ ಬಾಡಿಗೆದಾರನಾಗಿದ್ದೇನೆ. ಯಾವಾಗಲೂ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದ್ದೇನೆ. ಆದರೆ ನನ್ನ ಠೇವಣಿ ಹಣವನ್ನು ಹಿಂದಿರುಗಿಸುವಂತೆ ಮಾಲೀಕರನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅವರು ಬರೆದಿದ್ದಾರೆ.
ಮಾಲೀಕರು ಯಾವುದೇ ಪರಿಣಾಮಗಳನ್ನು ಎದುರಿಸದೆ ಹೀಗೆ ವರ್ತಿಸಲು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಸೇರಬೇಕಾದ ಹಣಕ್ಕಾಗಿ ಪದೇಪದೆ ಮನವಿ ಮಾಡಬೇಕಾಗುತ್ತಿರುವುದೂ ನೋವು ತಂದಿದೆ ಎಂದು ಹೇಳಿದ್ದಾರೆ.
“ನನ್ನ ಸಂದೇಶಗಳನ್ನು ನೇರವಾಗಿ ನಿರ್ಲಕ್ಷಿಸುತ್ತಾರೆ ಅಥವಾ ಏನಾದರೂ ನೆಪ ಹೇಳುತ್ತಾರೆ. ನನ್ನದೇ ಹಣವನ್ನು ಪಡೆಯಲು ಇಷ್ಟೊಂದು ಬೇಡಿಕೊಳ್ಳಬೇಕಾಗುತ್ತಿರುವುದನ್ನು ನಾನು ದ್ವೇಷಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೂ ಕೆಲವೇ ದಿನಗಳಲ್ಲಿ ಹಣ ಮರಳಿ ಸಿಗದಿದ್ದರೆ ಕಾನೂನು ನೆರವು ಪಡೆಯಲು ಸಿದ್ಧನಿದ್ದೇನೆ ಎಂದೂ ತಿಳಿಸಿದ್ದಾರೆ.
“ಅವರು ಶ್ರೀಮಂತರಾಗಿದ್ದರೂ, ಇತರರಿಗೆ ಪಾವತಿಸಬೇಕಾದ ಹಣವನ್ನು ನೀಡದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಅಸಹ್ಯಕರ. ನನಗೆ ವಕೀಲರ ಪರಿಚಯವಿದೆ. ಕೆಲವೇ ದಿನಗಳಲ್ಲಿ ಹಣ ಮರಳಿ ಸಿಗದಿದ್ದರೆ, ಇಲ್ಲಿ ಸಲಹೆ ನೀಡಿದವರ ಮಾತಿನಂತೆ ಅನಿವಾರ್ಯವಾಗಿ ಕಾನೂನು ಕ್ರಮದ ಬಗ್ಗೆ ಯೋಚಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಠೇವಣಿ ಹಣ ವಾಪಸ್ ಪಡೆಯಲು ಕಾನೂನು ಕ್ರಮಕ್ಕೆ ಸಲಹೆ
ಈ ಪೋಸ್ಟ್ಗೆ ಹಲವು ರೆಡಿಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರೆ, ಇನ್ನು ಕೆಲವರು ಇಂತಹ ವಿವಾದಗಳಲ್ಲಿ ಹೋರಾಡಲು ಅನೇಕ ಬಾಡಿಗೆದಾರರು ಹಿಂದೇಟು ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಕಾನೂನು ಪ್ರಕ್ರಿಯೆ ಸಮಯ ತೆಗೆದುಕೊಳ್ಳುವುದರ ಜೊತೆಗೆ ಮಾನಸಿಕ ಒತ್ತಡವನ್ನೂ ಉಂಟುಮಾಡಬಹುದು.
ಒಬ್ಬ ಬಳಕೆದಾರರು ಬಾಡಿಗೆದಾರರಿಗೆ ಠೇವಣಿ ಹಣ ಮರಳಿ ಪಡೆಯಲು ನೆರವಾಗುವ ಸ್ಟಾರ್ಟ್ಅಪ್ ಆರಂಭಿಸುವ ಆಲೋಚನೆಯನ್ನು ಹಂಚಿಕೊಂಡಿದ್ದಾರೆ.
“ಬಾಡಿಗೆದಾರರಿಗೆ ಅವರ ಭದ್ರತಾ ಠೇವಣಿ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಸ್ಟಾರ್ಟ್ಅಪ್ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಈ ಸೇವೆಗೆ ಶುಲ್ಕ ವಿಧಿಸುತ್ತೇನೆ. ಆದರೆ ಹಣವನ್ನು ಯಶಸ್ವಿಯಾಗಿ ಮರಳಿ ಪಡೆದ ನಂತರವಷ್ಟೇ ಶುಲ್ಕ ಪಡೆಯುತ್ತೇನೆ” ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬರು ಇಂತಹ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಇದು ಮಧ್ಯಸ್ಥಿಕೆ ಮೂಲಕ ವಿವಾದ ಪರಿಹರಿಸಲು ದೊಡ್ಡ ಅವಕಾಶವನ್ನು ಒದಗಿಸುತ್ತದೆ. ಆದರೆ ಇದಕ್ಕಾಗಿ ಸಮಯ ಮತ್ತು ಶ್ರಮ ವ್ಯಯಿಸುವುದು ಯಾರಿಗೂ ಅಷ್ಟೊಂದು ಪ್ರಯೋಜನಕಾರಿಯಾಗಿ ಕಾಣದಿರಬಹುದು” ಎಂದು ಬರೆದಿದ್ದಾರೆ.
ಹೈದರಾಬಾದ್ನಲ್ಲಿ ತಮಗೆ ಎದುರಾದ ಅನುಭವವನ್ನೂ ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಮನೆ ಮಾಲೀಕರೊಬ್ಬರು ₹1.2 ಲಕ್ಷ ಠೇವಣಿ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
“ಬಾಡಿಗೆದಾರರು ಎದುರಿಸಿ ಹೋರಾಡುವುದಿಲ್ಲ ಎಂಬ ನಿರೀಕ್ಷೆಯಲ್ಲೇ ಇಂತಹವರು ಇರುತ್ತಾರೆ. ಹೈದರಾಬಾದ್ನಲ್ಲಿ ಅತ್ಯಂತ ಶ್ರೀಮಂತ ಮನೆ ಮಾಲೀಕರೊಬ್ಬರು ನನ್ನ ₹1.2 ಲಕ್ಷ ಠೇವಣಿ ಹಣವನ್ನು ಮರಳಿ ನೀಡಲು ನಿರಾಕರಿಸಿದ್ದರು. ನಾನು ಅವರನ್ನು ನೇರವಾಗಿ ಪ್ರಶ್ನಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಕೊನೆಗೆ ಅವರು ಮಣಿದು ನನ್ನ ಹಣವನ್ನು ಹಿಂದಿರುಗಿಸಿದರು” ಎಂದು ಅವರು ತಿಳಿಸಿದ್ದಾರೆ.
ಮತ್ತೊಬ್ಬರು ಮನೆ ಮತ್ತೆ ಬಾಡಿಗೆಗೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ. ಹಣ ಇನ್ನೂ ಸಿಗದಿದ್ದರೆ ವಕೀಲರನ್ನು ಸಂಪರ್ಕಿಸುವಂತೆಯೂ ಹೇಳಿದ್ದಾರೆ.
“ಸಾಮಾನ್ಯವಾಗಿ ಇಂತಹ ಮನೆ ಮಾಲೀಕರು ಹೊಸ ಬಾಡಿಗೆದಾರರು ಬರುವವರೆಗೆ ಕಾಯುತ್ತಾರೆ. ಹೊಸದಾಗಿ ಬರುವವರ ಠೇವಣಿ ಹಣದಿಂದ ಹಿಂದಿನ ಬಾಡಿಗೆದಾರರಿಗೆ ಹಣ ನೀಡುತ್ತಾರೆ. ಮನೆ ಈಗಾಗಲೇ ಬೇರೆಯವರಿಗೆ ಬಾಡಿಗೆಗೆ ನೀಡಿದ್ದರೂ ನಿಮ್ಮ ಹಣ ಸಿಗದಿದ್ದರೆ, ವಕೀಲರನ್ನು ಸಂಪರ್ಕಿಸಿ” ಎಂದು ಸಲಹೆ ನೀಡಿದ್ದಾರೆ.
ಕೊನೆಗೂ ಠೇವಣಿ ಹಣ ಮರಳಿ ಪಡೆದ ಬಾಡಿಗೆದಾರ!
ನಂತರದ ಅಪ್ಡೇಟ್ನಲ್ಲಿ, ಆನ್ಲೈನ್ನಲ್ಲಿ ಹಲವರು ನೀಡಿದ ಸಲಹೆ ಮತ್ತು ನೆರವಿನ ಬಳಿಕ ತಮ್ಮ ಭದ್ರತಾ ಠೇವಣಿ ಹಣವನ್ನು ಮರಳಿ ಪಡೆದಿರುವುದಾಗಿ ಬಾಡಿಗೆದಾರರು ತಿಳಿಸಿದ್ದಾರೆ.
ಹಕ್ಕು ನಿರಾಕರಣೆ: ಈ ಸುದ್ದಿ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿಯನ್ನು ಆಧರಿಸಿದೆ. ಮೂಲ ಪೋಸ್ಟ್ನಲ್ಲಿರುವ ಆರೋಪಗಳನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಿಲ್ಲ.

