ದಾವಣಗೆರೆ: ಮಹಿಳಾ ನೌಕರರಿಗೆ ಕಲ್ಪಿಸಿರುವ ಒಂದು ದಿನದ ಋತುಚಕ್ರ ರಜೆಯನ್ನು ಶಾಲಾ-ಕಾಲೇಜು, ವಿದ್ಯಾರ್ಥಿನಿಯರಿಗೂ ವಿಸ್ತರಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಅಪರ್ಣಾ ಎಂ. ಕೊಳ್ಳ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ನಡೆದ ನಿಮ್ಮ ಹಕ್ಕು ನಮ್ಮ ಧ್ವನಿ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಮಹಿಳಾ ನೌಕರರಂತೆ ನಮಗೂ ಸಮಸ್ಯೆ ಇರುತ್ತದೆ. ಹೀಗಾಗಿ ಅವರಿಗೆ ತಿಂಗಳಲ್ಲಿ ಒಂದು ದಿನ ನೀಡಿರುವ ಋತುಚಕ್ರ ರಜೆ ಸೌಲಭ್ಯ ನಮಗೂ ವಿಸ್ತರಿಸಬೇಕು. ಇದು ನಮ್ಮ ಹಕ್ಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಪರ್ಣಾ ಎಂ. ಕೊಳ್ಳ ಅವರು, ಇದು ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ. ಕೂಡಲೇ ರಾಜ್ಯ ಸರ್ಕಾರಕ್ಕೆ ಈ ಕುರಿತಾಗಿ ಶಿಫಾರಸು ಮಾಡುತ್ತೇವೆ. ಮಹಿಳಾ ನೌಕರರಿಗೆ ಕಲ್ಪಿಸಿರುವ ಋತುಚಕ್ರ ರಜೆಯನ್ನು ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ವಿಸ್ತರಿಸುವಂತೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

