ಭಿವಂಡಿ : ಮಹತ್ತರವಾದ ಶಕ್ತಿಯೊಂದಿಗೆ ಮಹತ್ತರವಾದ ಜವಾಬ್ದಾರಿಯೂ ಬರುತ್ತದೆ ಎಂಬ ಸಾಲು ಕೇವಲ ಸಿನಿಮಾಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಮಹಾರಾಷ್ಟ್ರದ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಭಾರಿ ಮಳೆಗೆ ಜಲಾವೃತಗೊಂಡಿರುವ ಭಿವಂಡಿ ನಗರದಲ್ಲಿ ಸ್ಥಳೀಯ ಕಂಟೆಂಟ್ ಕ್ರಿಯೇಟರ್ ಶಾದಾಬ್ ಮೋಮಿನ್ ಎಂಬ ಯುವಕ ಸ್ಪೈಡರ್‌ಮ್ಯಾನ್ ಕಾಸ್ಟ್ಯೂಮ್ ಧರಿಸಿ, ಪ್ರವಾಹದಲ್ಲಿ ಸಿಲುಕಿದ ಸಾರ್ವಜನಿಕರ ನೆರವಿಗೆ ಧಾವಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾನೆ.
ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭಿವಂಡಿ ನಗರ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಗಳು ನದಿಗಳಂತಾಗಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವೇಳೆ ಸ್ಪೈಡರ್‌ಮ್ಯಾನ್ ವೇಷ ಧರಿಸಿ ರಸ್ತೆಗಿಳಿದ ಶಾದಾಬ್ ಮೋಮಿನ್, ಮೊಣಕಾಲುದ್ದ ನೀರಿನಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸಿದ್ದಾನೆ. ನೀರಿನಲ್ಲಿ ಮುಳುಗಡೆಯಾಗಿದ್ದ ಅಪಾಯಕಾರಿ ಗುಂಡಿಗಳ (Potholes) ಬಗ್ಗೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದು, ಆಫ್ ಆಗಿದ್ದ ಗಾಡಿಗಳನ್ನು ತಳ್ಳಿ ದಡ ಸೇರಿಸಿದ್ದಾನೆ. ಈತನ ಸಾಹಸದ ವಿಡಿಯೋಗಳು ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಮಳೆಯ ಆತಂಕದಲ್ಲಿದ್ದ ಸಾರ್ವಜನಿಕರು ಹಾಗೂ ಮಕ್ಕಳಿಗೆ ಸಣ್ಣ ನಗು ತರಿಸಿದೆ.
ಶಾದಾಬ್ ಕೇವಲ ಜನರಿಗೆ ಸಹಾಯ ಮಾಡುವುದಷ್ಟೇ ಅಲ್ಲದೆ, ತನ್ನ ಈ ವೈರಲ್ ಆಕ್ಟ್ ಮೂಲಕ ಸ್ಥಳೀಯ ಮಹಾನಗರ ಪಾಲಿಕೆಯ ವಿರುದ್ಧ ವಿನೂತನವಾಗಿ ಆಕ್ರೋಶ ಹೊರಹಾಕಿದ್ದಾನೆ. “ಪ್ರತಿ ವರ್ಷ ರಸ್ತೆ ರಿಪೇರಿ ಮತ್ತು ಡ್ರೈನೇಜ್ ವ್ಯವಸ್ಥೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಪ್ರತಿ ಮುಂಗಾರಿನಲ್ಲೂ ರಸ್ತೆಗಳು ಯಾಕೆ ಹೀಗೆ ಮುಳುಗುತ್ತವೆ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾನೆ. ಸಾರ್ವಜನಿಕರು ಈತನ ಧೈರ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ.
ಮುಂಬೈ, ಠಾಣೆ ಮತ್ತು ಪಾಲ್ಘರ್ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ (IMD) ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ವರ್ಕ್ ಫ್ರಮ್ ಹೋಮ್ ಆಫರ್ ಮಾಡಲು ಕಂಪನಿಗಳಿಗೆ ಸೂಚಿಸಲಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಾಲ್ಘರ್‌ನಲ್ಲಿ ರೋಗಿಯೊಬ್ಬರಿದ್ದ ಕಾರು ನೀರಿನಲ್ಲಿ ಸಿಲುಕಿದಾಗ ಗ್ರಾಮಸ್ಥರು ಹಗ್ಗ ಕಟ್ಟಿ ಎಳೆದ ಪ್ರಸಂಗವೂ ನಡೆದಿದೆ. ಪ್ರಸ್ತುತ ರಕ್ಷಣಾ ತಂಡಗಳು ಕಟ್ಟೆಚ್ಚರ ವಹಿಸಿದ್ದು, ತುರ್ತು ಕಾರ್ಯಾಚರಣೆ ನಡೆಸುತ್ತಿವೆ.

