ನಿನ್ನೆ ( ಜುಲೈ 7 ) ಟ್ರೆಂಟ್ ಬ್ರಿಡ್ಜ್‌ನ ನಾಟಿಂಗ್‌ಹ್ಯಾಮ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಅನುಭವಿಸಿ ಸರಣಿಯಲ್ಲಿ ಕೆಟ್ಟ ಹಿನ್ನಡೆ ಅನುಭವಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ಭಾರತಕ್ಕೆ 202 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ನೆಲ ಕಚ್ಚಿದ ಭಾರತ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗೆ ಆಲ್‌ಔಟ್ ಆಯಿತು. ಈ ಮೂಲಕ ಇಂಗ್ಲೆಂಡ್ 125 ರನ್‌ಗಳ ಗೆಲುವನ್ನು ಕಂಡು 2-0 ಅಂತರದಲ್ಲಿ ಗೆಲುವನ್ನು ಸಾಧಿಸಿತು.
ಇಂಗ್ಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ ಅಬ್ಬರದ ಆಟದ ನೆರವಿನಿಂದ ಒಳ್ಳೆಯ ಮೊತ್ತ ಕಲೆಹಾಕಿತು. ಫಿಲ್ ಸಾಲ್ಟ್ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇನ್ನುಳಿದಂತೆ ಜೋಶ್ ಬಟ್ಲರ್ 21 ಎಸೆತಕ್ಕೆ 36 ರನ್, ನಾಯಕ ಹ್ಯಾರಿ ಬ್ರೂಕ್ 16, ಜೇಕಬ್ ಬೆಥೆಲ್ 13, ಟಾಮ್ ಬ್ಯಾಂಟನ್ ಡಕ್‌ಔಟ್, ವಿಲ್ ಜಾಕ್ಸ್ 14, ಜೋಫ್ರಾ ಆರ್ಚರ್ 5, ಸ್ಯಾಮ್ ಕರನ್ 24 ಎಸೆತಗಳಲ್ಲಿ ಅಜೇಯ 41 ರನ್ ಮತ್ತು ಯಾವುದೇ ರನ್ ಗಳಿಸದ ಲಿಯಾಮ್ ಡಾಸನ್ ಅಜೇಯರಾಗಿ ಉಳಿದರು.
ಭಾರತದ ಪರ ಹರ್ಷಿತ್ ರಾಣಾ ಹಾಗೂ ಪ್ರಿನ್ಸ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನಟ್ಟಲು ಬೇಕಾದ ಇನ್ನಿಂಗ್ಸ್ ಕಟ್ಟುವಲ್ಲಿ ಭಾರತದ ಯಾವ ಬ್ಯಾಟ್ಸ್‌ಮನ್ ಸಹ ಯಶಸ್ವಿಯಾಗಲಿಲ್ಲ. ಜೋಫ್ರಾ ಆರ್ಚರ್ ಹಾಗೂ ಜೋಶ್ ಟಂಗ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತದ ಬ್ಯಾಟಿಂಗ್ ಪಡೆ ಮಕಾಡೆ ಮಲಗಿತು. ತಂಡದ ಪರ ಅಭಿಷೇಕ್ ಶರ್ಮಾ 10, ವೈಭವ್ ಸೂರ್ಯವಂಶಿ 13, ಇಶಾನ್ ಕಿಶನ್ 13, ನಾಯಕ ಶ್ರೇಯಸ್ ಐಯ್ಯರ್ 5, ಅಕ್ಸರ್ ಪಟೇಲ್ 10, ತಿಲಕ್ ವರ್ಮಾ 3, ಹರ್ಷಿತ್ ರಾಣಾ 9, ಶಿವಮ್ ದುಬೆ 2, ಅರ್ಷ್‌ದೀಪ್ ಸಿಂಗ್ 4, ವರುಣ್ ಚಕ್ರವರ್ತಿ 5 ಹಾಗೂ ಪ್ರಿನ್ಸ್ ಯಾದವ್ ಅಜೇಯ 2 ರನ್ ಗಳಿಸಿದರು.
ಜೋಶ್ ಟಂಗ್ 4 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮೂರು ವಿಕೆಟ್, ಆದಿಲ್ ರಶೀದ್ ಎರಡು ವಿಕೆಟ್ ಹಾಗೂ ವಿಲ್ ಜಾಕ್ಸ್ ಒಂದು ವಿಕೆಟ್ ಪಡೆದರು.

