ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶೀಘ್ರವೇ ಬಂಪರ್ ಕೊಡುಗೆ ಸಿಗಲಿದೆ. ಹೌದು ಈ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಸಚಿವರು ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕರ್ಕಿ ತೂಗು ಸೇತುವೆಯನ್ನು ವೀಕ್ಷಣೆ ಮಾಡಿದರು. ಪ್ರವಾಸೋದ್ಯಮ ಉದ್ದೇಶದಿಂದ ಇದನ್ನು ಪುನರ್ ನಿರ್ಮಾಣ ಮಾಡಲು ಸಾರ್ವಜನಿಕರಿಂದ ಬಹುಕಾಲದಿಂದ ಬೇಡಿಕೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ತೂಗು ಸೇತುವೆಯ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಇದಾದ ಬಳಿಕ ಹೊನ್ನಾವರ ಸಮೀಪದ ಕುದ್ರಿಗಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ಪಾವಿನಕುರುವ ಸೇತುವೆಗೆ ಭೇಟಿ ನೀಡಿ, ಅದರ ಸ್ಥಿತಿಯನ್ನು ಅವಲೋಕಿಸಿದರು.
ಶಿಥಿಲಗೊಂಡಿರುವ ಸೇತುವೆ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆಯ ಶಿಥಿಲಗೊಂಡಿದೆ. 2022ರಿಂದಲೇ ಜನರು ಇದನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಒಂದು ಕಾಲದಲ್ಲಿ ಈ ತೂಗು ಸೇತುವೆ ಪ್ರವಾಸಿಗರ ಹಾಟ್ ಸ್ಪಾಟ್ ಆಗಿತ್ತು. ಫೋಟೋಶೂಟ್, ರೀಲ್ಸ್ಗಳಿಗೆ ಪ್ರಸಿದ್ಧ ತಾಣವಾಗಿ ಜನಪ್ರಿಯತೆಯನ್ನು ಪಡೆದಿತ್ತು. ಆದರೆ ಈಗ ಸೇತುವೆ ವೈಭವವನ್ನು ಕಳೆದುಕೊಂಡಿದೆ.
ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆ ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದೆ. ಕರ್ಕಿ ಮತ್ತು ಪಾವಿನಕುರ್ವೆಯನ್ನು ಈ ಸೇತುವೆ ಸಂಪರ್ಕಿಸುತ್ತದೆ. ಸೇತುವೆಗೆ ಅಳವಡಿಕೆ ಮಾಡಿರುವ ಹಲಗೆಗಳು ಹಳೆಯದಾಗಿವೆ.
ಸರಳುಗಳು ತುಕ್ಕು ಹಿಡಿದಿವೆ, ಸೇತುವೆ ಕೆಳಭಾಗದ ಕಬ್ಬಿಣದ ಪಟ್ಟಿಗಳು ತುಂಡಾಗಿ ಬೀಳುವ ಹಂತದಲ್ಲಿವೆ. ಆದ್ದರಿಂದ ಜನರು ಆತಂಕದಲ್ಲಿಯೇ ಸಂಚಾರ ನಡೆಸುವಂತಾಗಿದ್ದು, ಸೇತುವೆ ಪುನರ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ.
ಗ್ರಾಮ ಪಂಚಾಯಿತಿ ಜನರ ಆತಂಕ ದೂರ ಮಾಡಲು ಕೆಲವು ಹಲಗೆ ಬದಲಾವಣೆ ಮಾಡುವ ಕಾರ್ಯವನ್ನು ಮಾಡಿತ್ತು. ಆದರೆ ಸಂಪೂರ್ಣ ಸೇತುವೆ ಪುನರ್ ನಿರ್ಮಾಣ ಮಾಡಬೇಕು ಎಂಬುದು ಬೇಡಿಕೆಯಾಗಿದ್ದು, ಸಚಿವರು ಇಂದು ಪರಿಶೀಲನೆ ನಡೆಸಿದ್ದಾರೆ.

