HomeKarnatakaBIG NEWS: ಸಂಭ್ರಮಾಚರಣೆ ವೇಳೆ ಆರ್ ಸಿಬಿ ಅಭಿಮಾನಿಗಳ ಹುಚ್ಚಾಟ: ವಿವಿಧ ಜಿಲ್ಲೆಗಳಲ್ಲಿ ಲಾಠಿ ಚಾರ್ಜ್

BIG NEWS: ಸಂಭ್ರಮಾಚರಣೆ ವೇಳೆ ಆರ್ ಸಿಬಿ ಅಭಿಮಾನಿಗಳ ಹುಚ್ಚಾಟ: ವಿವಿಧ ಜಿಲ್ಲೆಗಳಲ್ಲಿ ಲಾಠಿ ಚಾರ್ಜ್

ಬೆಂಗಳೂರು: ಗುಜರಾತ್ ನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಗರ್ಜನೆ ಹಾಗೂ ರೆಡ್ ಆರ್ಮಿ ಆರ್ಭಟಕ್ಕೆ ಸಿಕ್ಕ ಜಯದ ಬೆನ್ನಲ್ಲೇ ಕರ್ನಾಟಕದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಗೆಲುವಿನ ಸಂಭ್ರಮ ಆಚರಿಸುವ ಭರದಲ್ಲಿ ರಾಜ್ಯದ ಹಲವೆಡೆ ಆರ್‌ಸಿಬಿ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹಲವೆಡೆ ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳ ದಂಡೇ ನೆರೆದಿತ್ತು. ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬಂದಿದ್ದ ಸಹಸ್ರಾರು ಜನ ರಸ್ತೆಗೆ ಇಳಿದು ಜೈಕಾರ ಹಾಕಿದರು. ಕಬ್ಬನ್ ಪಾರ್ಕ್ ಬಳಿ ಕೆಲವು ಯುವಕರು ಚಲಿಸುತ್ತಿದ್ದ ಕಾರುಗಳ ಸನ್‌ರೂಫ್ ಮೇಲೆ ನಿಂತು ಆರ್‌ಸಿಬಿ ಬಾವುಟ ಪ್ರದರ್ಶಿಸುತ್ತಾ ಸಂಚಾರಕ್ಕೆ ಅಡ್ಡಿಪಡಿಸಿದರು.

ಭಾರಿ ಭದ್ರತೆ ಕೈಗೊಂಡಿದ್ದ ಪೊಲೀಸರು ಅತಿರೇಕವಾಗಿ ವರ್ತಿಸಿದ ಯುವಕರಿಗೆ ಖಡಕ್ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮೊಂಡಾಟ ಮುಂದುವರಿಸಿದ ಅಭಿಮಾನಿಗಳಿಗೆ ಪೊಲೀಸರು ಸಣ್ಣ ಪ್ರಮಾಣದ ಲಾಠಿ ರುಚಿ ತೋರಿಸಿದರು.

ಬೆಳಗಾವಿಯ ಆರ್‌.ಪಿ.ಡಿ ವೃತ್ತದಲ್ಲಿ ನೂರಾರು ಯುವಕರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬಾಗಲಕೋಟೆಯ ವಿದ್ಯಾಗಿರಿ ಇಂಜಿನಿಯರಿಂಗ್ ವೃತ್ತದಲ್ಲಿ ತಡರಾತ್ರಿವರೆಗೂ ರಸ್ತೆ ತಡೆದು ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಗಳು ಮನೆಗೆ ಹೋಗಲು ನಿರಾಕರಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮಂಡ್ಯದ ಸಂಜಯ ವೃತ್ತದಲ್ಲಿ ಸೇರಿದ ಅಭಿಮಾನಿಗಳು ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿಗಳ ಮೇಲೆ ಏರಿ ಮೊಂಡಾಟ ಮೆರೆದರು. ಬಳ್ಳಾರಿಯ ರಾಯಲ್ ಸರ್ಕಲ್ ಬಳಿಯೂ ಇದೇ ರೀತಿಯ ಘಟನೆ ನಡೆದಿದ್ದು, ಸಂಭ್ರಮಾಚರಣೆ ನಡುವೆ ಬಂದ ಲಾರಿಗೆ ಅಡ್ಡ ನಿಂತು ಯುವಕರು ಹುಚ್ಚಾಟವಾಡಿದ್ದಾರೆ. ಲಾರಿಗೆ ದಾರಿ ಬಿಡದೆ, ಅದರ ಮೇಲಕ್ಕೇರಲು ಯತ್ನಿಸಿದ ಯುವಕರನ್ನು ಪೊಲೀಸರು ಕೆಳಗಿಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಾರ್ವಜನಿಕರ ಜೀವಕ್ಕೆ ಆಪತ್ತು ತಂದ ಕೆಲವು ಅಭಿಮಾನಿಗಳಿಗೆ ಲಾಠಿ ಬಿಸಿ ತೋರಿಸಿದ್ದಾರೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲೂ ರಸ್ತೆಯಲ್ಲೇ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular