ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ವರ್ಷಗಳ ನಂತರ 2.65 ಕೋಟಿ ಕಾರ್ಡುಗಳ ಇ-ಕೆವೈಸಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಹೊಸದಾಗಿ ಪಡಿತರ ಚೀಟಿ ವಿತರಿಸಲು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಇ-ಕೆವೈಸಿ ನಂತರ ಎಷ್ಟು ಪ್ರಮಾಣದಲ್ಲಿ ಕಾರ್ಡುಗಳು ಪತ್ತೆಯಾಗಿವೆ ಎನ್ನುವುದನ್ನು ನೋಡಿಕೊಂಡು ಹೊಸ ಫಲಾನುಭವಿಗಳಿಗೆ ಅವಕಾಶ ನೀಡಲಾಗುವುದು. ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ನಿಗದಿ ಮಾಡಿದ ಆದಾಯದ ಮಿತಿ ಹೆಚ್ಚಳ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆಯಡಿ ಗ್ರಾಮೀಣ ಪ್ರದೇಶದ ಶೇಕಡ 75, ನಗರ ಪ್ರದೇಶದ ಶೇಕಡ 50ರಷ್ಟು ಮಂದಿ ಫಲಾನುಭವಿಗಳಾಗಬೇಕು. ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ಇನ್ನೂ 50 ಲಕ್ಷ ಫಲಾನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ತೆರಿಗೆ ಪಾವತಿ, ಜಿಎಸ್ಟಿ ಪಾವತಿಸಿದ ಮತ್ತು ಕಳೆದ 12 ತಿಂಗಳಿಂದ ಪಡಿತರ ಪಡೆಯದವರನ್ನು ಗುರುತಿಸಿ ಕೇಂದ್ರ ಸರ್ಕಾರ 7 ಲಕ್ಷ ಕಾರ್ಡುಗಳ ಪಟ್ಟಿ ಕಳುಹಿಸಿ ಪರಿಷ್ಕರಣೆಗೆ ಸೂಚಿಸಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಡುಗಳು ರದ್ದಾಗುತ್ತವೆ. ಹೀಗಾಗಿ ತಾತ್ಕಾಲಿಕವಾಗಿ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತಕ್ಕೆ ಸೂಚಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ರದ್ದಾದ ಕಾರ್ಡುಗಳನ್ನು ಮರು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

