ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿಗೆ ನೀಡಲಾಗುವ ಶೌರ್ಯ ಪ್ರಶಸ್ತಿಗಳ ಘೋಷಣೆ ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 78 ಶೌರ್ಯ ಪ್ರಶಸ್ತಿಗಳಿಗೆ ಅನುಮೋದನೆ ನೀಡಿದ್ದಾರೆ. ಈ ಪೈಕಿ 13 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ದೊರೆಯಲಿದೆ. 78 ಶೌರ್ಯ ಪ್ರಶಸ್ತಿಗಳಲ್ಲಿ 9 ಮಂದಿಗೆ ಕೀರ್ತಿ ಚಕ್ರ ನೀಡಲಾಗುತ್ತಿದ್ದು, ಅವರಲ್ಲಿ 7 ಮಂದಿಗೆ ಮರಣೋತ್ತರವಾಗಿ ಈ ಗೌರವ ಲಭಿಸಲಿದೆ. ಒಬ್ಬರಿಗೆ ಬಾರ್ ಟು ಶೌರ್ಯ ಚಕ್ರ, 19 ಮಂದಿಗೆ ಶೌರ್ಯ ಚಕ್ರ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತಿದೆ.
ಇದರ ಜೊತೆಗೆ, ಐದು ಮಂದಿಗೆ ಬಾರ್ ಟು ಸೇನಾ ಮೆಡಲ್ (ಶೌರ್ಯ), 36 ಮಂದಿಗೆ ಸೇನಾ ಮೆಡಲ್ (ಶೌರ್ಯ) ನೀಡಲಾಗುತ್ತಿದ್ದು, ಇವರಲ್ಲಿ ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ದೊರೆಯಲಿದೆ. ಮೂವರಿಗೆ ನೌ ಸೇನಾ ಮೆಡಲ್ (ಶೌರ್ಯ) ಹಾಗೂ ವಾಯು ಸೇನಾ ಮೆಡಲ್ (ಶೌರ್ಯ) ಕೂಡ ನೀಡಲಾಗುತ್ತಿದೆ.ದೇಶದ ರಕ್ಷಣೆಯಲ್ಲಿ ಅತ್ಯುನ್ನತ ಧೈರ್ಯ, ಸಾಹಸ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ ವೀರ ಯೋಧರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.ಇದೇ ವೇಳೆ, 89 ಮಂದಿಗೆ ‘ಮೆನ್ಷನ್-ಇನ್-ಡಿಸ್ಪ್ಯಾಚಸ್’ (ವಿಶಿಷ್ಟ ಸೇವಾ ಗೌರವ) ನೀಡಲು ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಭಾರತೀಯ ಸೇನೆಯ 75 ಮಂದಿ, ಭಾರತೀಯ ನೌಕಾಪಡೆಯ 4 ಮಂದಿ ಹಾಗೂ ಭಾರತೀಯ ವಾಯುಪಡೆಯ 10 ಮಂದಿ ಸಿಬ್ಬಂದಿ ಸೇರಿದ್ದಾರೆ.
ಪೊಲೀಸ್ ಮತ್ತು ಇತರ ಭದ್ರತಾ ಸಿಬ್ಬಂದಿಗೂ ಪದಕ
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್, ಅಗ್ನಿಶಾಮಕ ಸೇವೆ, ಹೋಂಗಾರ್ಡ್, ನಾಗರಿಕ ರಕ್ಷಣಾ ಹಾಗೂ ಕಾರಾಗೃಹ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ವಿವಿಧ ಪೊಲೀಸ್ ಪದಕಗಳನ್ನು ಘೋಷಿಸಿದೆ.ವಿವಿಧ ಇಲಾಖೆಗಳ 1,057 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳು ದೊರೆಯಲಿವೆ. ಈ ವರ್ಷ ಒಟ್ಟು 301 ಶೌರ್ಯ ಪದಕಗಳನ್ನು ಘೋಷಿಸಲಾಗಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸೇವೆಯ ಸಿಬ್ಬಂದಿ ಸೇರಿದ್ದಾರೆ.ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸುವುದು, ಅಪರಾಧಗಳನ್ನು ತಡೆಗಟ್ಟುವುದು ಅಥವಾ ಅಪರಾಧಿಗಳನ್ನು ಬಂಧಿಸುವಂತಹ ಕಾರ್ಯಗಳಲ್ಲಿ ಪ್ರದರ್ಶಿಸಿದ ಅಸಾಧಾರಣ ಧೈರ್ಯಕ್ಕಾಗಿ ಈ ಶೌರ್ಯ ಪದಕಗಳನ್ನು ನೀಡಲಾಗುತ್ತದೆ.
ಇನ್ನು, ಕರ್ತವ್ಯ ನಿರ್ವಹಣೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ 92 ಮಂದಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಘೋಷಿಸಲಾಗಿದೆ. ಇದರಲ್ಲಿ ಪೊಲೀಸ್ ಸೇವೆಗೆ 83, ಅಗ್ನಿಶಾಮಕ ಸೇವೆಗೆ 4, ನಾಗರಿಕ ರಕ್ಷಣೆ ಮತ್ತು ಹೋಂಗಾರ್ಡ್ ಸೇವೆಗೆ 3 ಹಾಗೂ ಕಾರಾಗೃಹ ಇಲಾಖೆಗೆ 2 ಪದಕಗಳಿವೆ.ಇದರ ಜೊತೆಗೆ, ಈ ವರ್ಷ 664 ಮಂದಿಗೆ ಮೆಡಲ್ಸ್ ಫಾರ್ ಮೆರಿಟೋರಿಯಸ್ ಸರ್ವಿಸ್ (ಅತ್ಯುತ್ತಮ ಸೇವಾ ಪದಕ) ಘೋಷಿಸಲಾಗಿದೆ. ಇದರಲ್ಲಿ ಪೊಲೀಸ್ ಸೇವೆಯ 606, ಅಗ್ನಿಶಾಮಕ ಸೇವೆಯ 28, ನಾಗರಿಕ ರಕ್ಷಣೆ ಮತ್ತು ಹೋಂಗಾರ್ಡ್ನ 18 ಹಾಗೂ ಕಾರಾಗೃಹ ಇಲಾಖೆಯ 12 ಸಿಬ್ಬಂದಿ ಸೇರಿದ್ದಾರೆ.

