ಮುಂಬೈ: ಸಾಮಾನ್ಯವಾಗಿ ನಾವು ರ್ಯಾಪಿಡೋ ಅಥವಾ ಇನ್ನಿತರ ರೈಡ್ ಆಪ್ಗಳಲ್ಲಿ ಬೈಕ್ ಬುಕ್ ಮಾಡಿದಾಗ ಸಾಮಾನ್ಯ ಬೈಕ್ ಅಥವಾ ಸ್ಕೂಟರ್ಗಳು ಬರುವುದು ಸಹಜ. ಆದರೆ ಮುಂಬೈನ ಯುವತಿಯೊಬ್ಬಳು ಬೈಕ್ ಬುಕ್ ಮಾಡಿದಾಗ ಬಂದಿದ್ದನ್ನು ಕಂಡು ಆಕೆ ಮಾತ್ರವಲ್ಲ, ಇಡೀ ಇಂಟರ್ನೆಟ್ ದಂಗಾಗಿದೆ. ಏಕೆಂದರೆ ಆಕೆಯನ್ನು ಪಿಕ್ ಅಪ್ ಮಾಡಲು ಬಂದಿದ್ದು ಸಾಧಾರಣ ಬೈಕ್ ಅಲ್ಲ, ಬದಲಾಗಿ ಲಕ್ಷಾಂತರ ರೂಪಾಯಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯೂ (BMW) ಬೈಕ್!
ಯುವತಿ ಈ ಅನಿರೀಕ್ಷಿತ ಕ್ಷಣವನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಯುವಕನೊಬ್ಬ ಐಷಾರಾಮಿ ಬೈಕ್ನಲ್ಲಿ ಬಂದು “ನೀವೇನಾ ರೈಡ್ ಬುಕ್ ಮಾಡಿದ್ದು?” ಎಂದು ಕೇಳುತ್ತಾನೆ. ಇದನ್ನು ಕಂಡು ಆಶ್ಚರ್ಯಚಕಿತಳಾದ ಯುವತಿ ತಮಾಷೆಯಾಗಿ “ಭಯ್ಯಾ, ನೀವು ಸಿಂಗಲ್ ಆ?” ಎಂದು ಕೇಳಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ಇವರನ್ನು ನೇರವಾಗಿ ಮದುವೆ ನೋಂದಣಿ ಕಚೇರಿಗೇ ಕರೆದುಕೊಂಡು ಹೋಗಿ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಅಕ್ಕಾ, ನೀವು ಯಾವ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ತಗೊಂಡಿದ್ದೀರಿ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. “ಪಾರ್ಟ್ನರ್ ಹುಡುಕಲು ಇದೇ ಹೊಸ ಆಪ್ ಇರಬೇಕು” ಎಂಬ ತಮಾಷೆಯ ಮಾತುಗಳು ಕೇಳಿಬರುತ್ತಿವೆ.
ಆದರೆ ಈ ಸುದ್ದಿಯ ಹಿಂದಿರುವ ಅಸಲಿ ಸತ್ಯವೆಂದರೆ, ಇದು ಕೇವಲ ವಿನೋದಕ್ಕಾಗಿ ಮಾಡಿದ ವಿಡಿಯೋ ಎನ್ನಲಾಗಿದೆ. ವಿಡಿಯೋದಲ್ಲಿರುವ ಯುವಕ ಮತ್ತು ಯುವತಿ ಹಳೆಯ ಸ್ನೇಹಿತರಾಗಿದ್ದು, ಮನೋರಂಜನೆಗಾಗಿ ಈ ರೀತಿ ಸ್ಕ್ರಿಪ್ಟ್ ಮಾಡಿ ವಿಡಿಯೋ ಚಿತ್ರೀಕರಿಸಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಯುವಕ ವಾಸ್ತವವಾಗಿ ಒಬ್ಬ ಬಾಡಿ ಟ್ರಾನ್ಸ್ಫರ್ಮೇಷನ್ ಕೋಚ್ ಮತ್ತು ಇನ್ಫ್ಲುಯೆನ್ಸರ್ ಆಗಿದ್ದಾರೆ. ಈ ಹಿಂದೆ ಇದೇ ರೀತಿ ರೆಡ್ ಡುಕಾಟಿ (Ducati) ಸೂಪರ್ ಬೈಕ್ ಬಳಸಿ ಇವರು ವಿಡಿಯೋ ಮಾಡಿದ್ದರು. ಒಟ್ಟಾರೆಯಾಗಿ ಸೋಷಿಯಲ್ ಮೀಡಿಯಾ ಮಂದಿಯನ್ನು ರಂಜಿಸುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.

