HomeLatest NewsBIG NEWS : 'ಹಲಾಲಾ' ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಸಹಿಸಲು ಆಗದು...

BIG NEWS : ‘ಹಲಾಲಾ’ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಸಹಿಸಲು ಆಗದು : ಹೈಕೋರ್ಟ್‌

ಲಖನೌ: ನಿಕಾಹ್ ಹಲಾಲಾ, ತ್ರಿವಳಿ ತಲಾಖ್ (ಟ್ರಿಪಲ್ ತಲಾಖ್) ಮೊದಲಾದ ಪದ್ಧತಿಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಕಠಿಣವಾಗಿ ಹೇಳಿದೆ. ಇಂತಹ ಪದ್ಧತಿಗಳು ಸಮಾಜದ “ಕರಾಳ ಅಧ್ಯಾಯ”ವಾಗಿದ್ದು, ಸಂವಿಧಾನದ ಮೌಲ್ಯಗಳು, ಸಮಾನತೆ ಹಾಗೂ ಮಾನವ ಘನತೆಗೆ ವಿರುದ್ಧವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇಂತಹ ಕೃತ್ಯಗಳು ಕೇವಲ ಕಾನೂನುಬಾಹಿರ ಅಪರಾಧಗಳಷ್ಟೇ ಅಲ್ಲ, ಸಮಾಜದ ಸಾಮೂಹಿಕ ಮನಸ್ಸಾಕ್ಷಿಯನ್ನೇ ತಲ್ಲಣಗೊಳಿಸುವಂತಿವೆ ಎಂದು ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ತರುಣ್ ಸಕ್ಸೇನಾ ಅವರ ವಿಭಾಗೀಯ ಪೀಠ ಹೇಳಿದೆ.

ಈ ಪ್ರಕರಣದಲ್ಲಿ ಸಂತ್ರಸ್ತೆಯ ಮಾಜಿ ಪತಿ, ಮಾವ, ಒಬ್ಬ ಮೌಲಾನಾ ಸೇರಿದಂತೆ ಹಲವು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ವೈಯಕ್ತಿಕ ಧಾರ್ಮಿಕ ಕಾನೂನುಗಳ ಹೆಸರಿನಲ್ಲಿ ಅಪರಾಧಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಾಲಯದ ಪ್ರಕಾರ, ಈ ಪ್ರಕರಣವು ಅಪ್ರಾಪ್ತೆಯ ಮೇಲೆ ಪೂರ್ವನಿಯೋಜಿತವಾಗಿ ನಡೆದ ಸಾಮೂಹಿಕ ಅತ್ಯಾಚಾರದ ಗಂಭೀರ ಆರೋಪಗಳನ್ನು ಒಳಗೊಂಡಿದ್ದು, ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ. ತನಿಖೆಯ ಆರಂಭಿಕ ಹಂತದಲ್ಲೇ ಎಫ್‌ಐಆರ್ ರದ್ದುಗೊಳಿಸಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿವರ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈದ್‌ನಗ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.ದೂರುದಾರೆಯ ಹೇಳಿಕೆಯ ಪ್ರಕಾರ, 2015ರ ಏಪ್ರಿಲ್‌ನಲ್ಲಿ ಆಕೆಗೆ ಕೇವಲ 15 ವರ್ಷ ವಯಸ್ಸಿದ್ದಾಗ ಪ್ರಮುಖ ಆರೋಪಿ ಅಜಹರ್ ನವಾಜ್‌ನೊಂದಿಗೆ ಬಲವಂತವಾಗಿ ವಿವಾಹ ಮಾಡಲಾಯಿತು. 2016ರ ಜನವರಿಯಲ್ಲಿ ಆತ ತ್ರಿವಳಿ ತಲಾಖ್ ನೀಡಿದ್ದನು.ತಿಂಗಳ ಬಳಿಕ ಮತ್ತೆ ಆಕೆಯನ್ನು ಮದುವೆಯಾಗುವ ಉದ್ದೇಶದಿಂದ 2016ರ ನವೆಂಬರ್‌ನಲ್ಲಿ ಸಹ ಆರೋಪಿ ಮೌಲಾನಾ ಖಯ್ಯೂಮ್ ಮೂಲಕ ನಿಕಾಹ್ ಹಲಾಲಾ ನಡೆಸಲಾಯಿತು. ಆಗ ಸಂತ್ರಸ್ತೆಗೆ 16 ವರ್ಷ ವಯಸ್ಸಾಗಿದ್ದು, ಹಲಾಲಾ ಪದ್ಧತಿಯ ಬಗ್ಗೆ ತನಗೆ ಯಾವುದೇ ಅರಿವು ಇರಲಿಲ್ಲ ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ನಂತರ 2017ರಲ್ಲಿ ಆಕೆ ಮತ್ತೆ ಅಜಹರ್ ನವಾಜ್‌ನನ್ನು ವಿವಾಹವಾಗಿದ್ದಳು. ಆದರೆ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ತ್ರಿವಳಿ ತಲಾಖ್ ನೀಡಿ, ಆತ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದನು.ಹೊಸ ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಮತ್ತೆ ಸಂತ್ರಸ್ತೆಯನ್ನು ಮನೆಗೆ ಕರೆತಂದು ಕುಟುಂಬದೊಂದಿಗೆ ಇರಲು ಒತ್ತಾಯಿಸಲಾಯಿತು. ಎರಡು ಬಾರಿ ವಿವಾಹ ಮುರಿದಿರುವುದರಿಂದ ಮತ್ತೊಮ್ಮೆ ಹಲಾಲಾ ಆಚರಣೆ ಮಾಡಬೇಕೆಂದು ಕುಟುಂಬದವರು ತಿಳಿಸಿದ್ದರು ಎಂದು ಆರೋಪಿಸಲಾಗಿದೆ.

2025ರ ಫೆಬ್ರವರಿ 19ರಂದು “ಡಬಲ್ ಹಲಾಲಾ” ಹೆಸರಿನಲ್ಲಿ ಪ್ರಮುಖ ಆರೋಪಿಯ ಸಹೋದರ ಹಾಗೂ ಸಂಬಂಧಿಕರು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವಿದೆ. ಅದೇ ದಿನ ಸಂಜೆ ಆಕೆಗೆ ನಕಲಿ ವಿವಾಹವನ್ನೂ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಸಂಪೂರ್ಣ ತನಿಖೆ ನಡೆಸಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular