ಬೆಂಗಳೂರು-ಬೆಂಗಳೂರಿನಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು; ಕೇವಲ ಬೆಲೆ ಏರಿಕೆ ಮಾಡಿಕೊಂಡು ಹಣಕಾಸು ಪರಿಸ್ಥಿತಿಯನ್ನು ನಿಬಾಯಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದೂರಿದರು.
ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.
ಪುಲಕೇಶಿ ನಗರದಲ್ಲಿ ರಾಜ್ಯ ಸರ್ಕಾರ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಜನತೆಗೆ ಕಲ್ಪಿಸಿಲ್ಲ ಹಾಗೂ ಹಾಲು, ಮೊಸರು ಇನ್ನಿತರ ಪದಾರ್ಥಗಳ ಬೆಲೆ ಏರಿಕೆ ಮೂಲಕ ಜನತೆಯ ಮೇಲೆ ಬರೆ ಎಳೆಯುತ್ತಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಅಖಂಡ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ; ಈ ಭಾಗದ ಜನರು ಕುಡಿಯುವ ನೀರು ಮತ್ತು ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪುಲಕೇಶಿ ನಗರದಲ್ಲಿ ಪ್ರಸ್ತುತ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು ₹250 ಕೋಟಿಗೂ ಹೆಚ್ಚು ತೆರಿಗೆ ಹಣ ಲೂಟಿಯಾಗಿದ್ದು, ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.
ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ವಾಗ್ದಾಳಿ:
ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ಮೇಲೆ ₹10 ರಿಂದ ₹12 ದರ ಏರಿಕೆ ಮಾಡಿದ್ದು, ಇದು ಬಡವರ ಮತ್ತು ಶ್ರಮಿಕರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ವಿರೋಧವಿಲ್ಲ, ಆದರೆ ಆ ಹಣ ರೈತರಿಗೂ ತಲುಪುತ್ತಿಲ್ಲ. ಬದಲಾಗಿ, ಮಕ್ಕಳಿರುವ ಬಡ ಕುಟುಂಬಗಳು ಹಾಲು, ಮೊಸರು ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ ಸಚಿವರು; ಇದರ ಜತೆಗೆ, ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.45ರಷ್ಟು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದಾಗಿ ಹೇಳಿ, ಮತ್ತೊಂದೆಡೆ ಬಸ್ ದರ ಹಾಗೂ ಪಾಸ್ ದರಗಳನ್ನು ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ಉಚಿತವಾಗಿ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರವು ತಾನೇ ನೀಡುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಅಕ್ಕಿಯನ್ನು ನೀಡದಿದ್ದರೆ, ರಾಜ್ಯ ಸರ್ಕಾರ ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡುತ್ತಿತ್ತು ಎಂದು ಸಚಿವರು ಹೇಳಿದರು.
ತಾಯಂದಿರಿಗೆ ನೀಡುವ ₹2000 ಯೋಜನೆಯಲ್ಲೂ ಹಣ ಬಿಡುಗಡೆಯಾಗುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಮತ್ತು ಯುವಕರಿಗೆ ಉದ್ಯೋಗವಿಲ್ಲ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.
ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜನರು ಪ್ರತಿಭಟನೆ ಮಾಡಲು ಮುಂದಾದರೆ.ಅದಕ್ಕೂ ಅವಕಾಶ ನೀಡುತ್ತಿಲ್ಲ. 50-100ಕ್ಕಿಂತ ಹೆಚ್ಚು ಜನ ಸೇರಬಾರದು, ನ್ಯಾಯಾಲಯದ ಆದೇಶವಿದೆ ಎಂದು ಹೇಳುವ ಮೂಲಕ ಜನರ ಪ್ರತಿಭಟಿಸುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ. ಈ ಸರ್ಕಾರದಲ್ಲಿ ಜನರಿಗೆ ಕನಿಷ್ಠ ತಮ್ಮ ಧ್ವನಿ ಎತ್ತುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶ್ರೀನಿವಾಸಮೂರ್ತಿ ಅವರು ಯಾವುದೇ ಜಾತಿ ಭೇದವಿಲ್ಲದೆ ಮುಸಲ್ಮಾನರು, ದಲಿತರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರನ್ನೂ ಸಮಾನವಾಗಿ ಕಂಡು ಕಷ್ಟ ಸುಖಗಳಲ್ಲಿ ಭಾಗಿಯಾಗುವ ವ್ಯಕ್ತಿ ಎಂದು ಸಚಿವರು ಶ್ಲಾಘಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಬಡವರ ಪರವಾದ ಮತ್ತು ಶ್ರಮಿಕರಿಗೆ ಪ್ರತಿಫಲ ದೊರಕುವಂತಹ ಉತ್ತಮ ಸರ್ಕಾರವನ್ನು ತರಲು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದ ಅವರು; ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಇರ್ಫಾನ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

