ಧಾರವಾಡ : ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಅಕ್ಕಪಡೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ವಿಸ್ತರಿಸಬೇಕು ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜೆ.ಎಸ್.ಎಸ್. ಕಾಲೇಜಿನ ಕದಂಬ ಕ್ರೀಡಾಂಗಣದಲ್ಲಿ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೆÇಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳ ಇವರ ಸಹಯೋಗದಲ್ಲಿ ಅಕ್ಕ ಪಡೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಗೃಹ ರಕ್ಷಕಿಯರ “ತೀವ್ರ ಸ್ವ-ರಕ್ಷಣೆ ಪ್ರದರ್ಶನ” ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮತ್ತು ಸುರಕ್ಷತೆಯ ಅರಿವು ಮೂಡಿಸಬೇಕು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂದಿನ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಕ್ಕಪಡೆ ಪರಿಕಲ್ಪನೆಯನ್ನು ರೂಪಿಸಿರುವುದು ಅಭಿನಂದನೀಯ. ಈ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಹಿಳೆಯರ ರಕ್ಷಣೆ ಹಾಗೂ ದೌರ್ಜನ್ಯ ತಡೆಗಟ್ಟುವ ಕಾರ್ಯದಲ್ಲಿ ಮಹಿಳಾ ಗೃಹರಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಯಾವುದೇ ಭಯವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಂತಾಗಬೇಕು. ಮಹಿಳೆಯರ ಸುರಕ್ಷತೆಗಾಗಿ ಜಾಗೃತಿ ಮೂಡಿಸುವುದರ ಜೊತೆಗೆ, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸೂಕ್ತ ನೆರವು ಮತ್ತು ರಕ್ಷಣೆ ಒದಗಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಗೃಹರಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಮಹಿಳೆಯರ ಗೌರವ, ಸ್ವಾಭಿಮಾನ ಹಾಗೂ ಸುರಕ್ಷತೆಯನ್ನು ಕಾಪಾಡಲು ಪೆÇಲೀಸ್ ಇಲಾಖೆ ಮತ್ತು ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಪೆÇಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬರಾವ್ ಅವರು ಮಾತನಾಡಿ, ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಫೆಬ್ರವರಿ ತಿಂಗಳಿನಿಂದ ಅಕ್ಕಪಡೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಹಲವು ಬಾಲ್ಯವಿವಾಹಗಳನ್ನು ತಡೆಗಟ್ಟಲು ಸಾಧ್ಯವಾಗಿದೆ. ಮಹಿಳೆಯರ ಸುರಕ್ಷತೆ ಇಂದಿಗೂ ಸಮಾಜದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಸುಮಾರು ಒಂದು ದಶಕದ ಹಿಂದೆ ದೇಶದಲ್ಲಿ ನಡೆದ ನಿರ್ಭಯಾ ಪ್ರಕರಣ ಮಹಿಳೆಯರ ಸುರಕ್ಷತೆಯ ಕುರಿತು ದೇಶದ ಗಮನ ಸೆಳೆದಿತ್ತು. ಆದರೂ ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕಾರ್ಯಗಳು ನಡೆಯಬೇಕಿವೆ. ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಯ ಸಮಸ್ಯೆ ಮುಂದುವರಿದಿರುವುದು ಆತಂಕಕಾರಿ ಸಂಗತಿಯಾಗಿದೆ. ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಮಹಿಳೆಯರಿಗೂ ಸುರಕ್ಷತೆಯ ಕುರಿತು ಎಚ್ಚರಿಕೆ ನೀಡುವ ಪರಿಸ್ಥಿತಿ ಇಂದಿಗೂ ಇದೆ ಎಂದು ಅವರು ಹೇಳಿದರು.
ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ, ಅಸಭ್ಯ ವರ್ತನೆ ಅಥವಾ ಸುರಕ್ಷತೆಗೆ ಧಕ್ಕೆ ಉಂಟಾದಲ್ಲಿ ತಕ್ಷಣ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಬೇಕು. ಮನೆಯವರು, ಅಕ್ಕಪಕ್ಕದವರು ಅಥವಾ ಶಾಲಾ ಪರಿಸರದಲ್ಲಿ ಯಾವುದೇ ರೀತಿಯ ಕಿರುಕುಳ ಅಥವಾ ಕೆಟ್ಟ ವರ್ತನೆ ಎದುರಾದರೂ ದೂರು ನೀಡಬಹುದು. ಅದೇ ರೀತಿ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ, 10 ನಿಮಿಷದೊಳಗೆ ಪೆÇಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ನೆರವು ನೀಡುವರು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಹಾಗೂ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವುದರಿಂದ ಸೈಬರ್ ಅಪರಾಧಗಳ ಅಪಾಯವೂ ಹೆಚ್ಚುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳ ವೈಯಕ್ತಿಕ ಫೆÇೀಟೋಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವುದು ಸೇರಿದಂತೆ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂ ಪೆÇಲೀಸ್ ಠಾಣೆಗೆ ಪ್ರತಿ ತಿಂಗಳು ಎರಡರಿಂದ ಮೂರು ದೂರುಗಳು ಬರುತ್ತಿವೆ. ಆದ್ದರಿಂದ ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಫೆÇೀಟೋಗಳನ್ನು ಯಾವುದೇ ಕಾರಣಕ್ಕೂ ಇತರರೊಂದಿಗೆ ಹಂಚಿಕೊಳ್ಳಬಾರದು. ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಕ್ಕ ಪಡೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಗೃಹ ರಕ್ಷಕಿಯರ ತೀವ್ರ ಸಂರಕ್ಷಣೆ ಕುರಿತು ಶಕ್ತಿ ಪ್ರದರ್ಶನ ನಡೆಸಿದರು. ಅಕ್ಕಪಡೆ ಮುಖ್ಯ ತರಬೇತಿದಾರ ಶಿವರಾಮ್ ರಾಠೋಡ, ಸಹ ತರಬೇತಿದಾರ ದೀಪಕ ರಾಠೋಡ ಅವರು ತರಬೇತಿ ಪ್ರದರ್ಶನ ನಡೆಸಿದರು.
ಅಕ್ಕಾ ಪಡೆ ರಾಜ್ಯ ಸಲಹೆಗಾರರು ಡಾ. ಶೈನಿ ರಾಜೇಂದ್ರಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ ಧಾರವಾಡ ಶಹರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶಿಲ್ಪಾ.ಜಿ.ಉಳ್ಳಿಕಾಶಿ ಅವರು ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್. ಆರ್., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಕೆ.ಎಸ್.ಪಿ.ಎಸ್ ಪೆÇಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಮತ್ತು ಪೆÇಲೀಸ್ ಅಧೀಕ್ಷಕ ಎಮ್.ಎಮ್.ಯಾದವಾಡ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ.ಅಜೀತ ಪ್ರಸಾದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕ್ಕ ಪಡೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಗೃಹರಕ್ಷಿಕಿಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

